ಅಂಡರ್‌ಪಾಸ್ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಆರೋಪ : ಸಂಸದ ತುಕಾರಾಂ -ಸ್ಥಳೀಯರ ನಡುವೆ ಮಾತಿನ ಚಕಮಕಿ

ಹೊಸಪೇಟೆ, ಜೂ.15: ಹೊಸಪೇಟೆ ತಾಲೂಕಿನ ಡಾಣಾಪುರ ಗ್ರಾಮ ಸಮೀಪದ ಅಂಡರ್‌ಪಾಸ್ ಕಾಮಗಾರಿ ಕಳಪೆ ಮಟ್ಟದಲ್ಲಿದೆ ಎಂಬ ಆರೋಪ ಮತ್ತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಂ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಅಂಡರ್‌ಪಾಸ್ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಯ ಗುಣಮಟ್ಟ ಕಳಪೆಯಾಗಿರುವುದರಿಂದ ರಸ್ತೆಯಲ್ಲಿ ತಗ್ಗು ಹಾಗೂ ಗುಂಡಿಗಳು ಉಂಟಾಗಿದ್ದವು. ಇದೇ ಸಂದರ್ಭದಲ್ಲಿ ಭಾರಿ ಗಾತ್ರದ ಲಾರಿಯೊಂದು ತಗ್ಗಿನಲ್ಲಿ ಸಿಲುಕಿ ಸಂಚಾರಕ್ಕೆ ಅಡಚಣೆ ಉಂಟುಮಾಡಿತ್ತು. ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ಹೊರತೆಗೆದು ಸಂಚಾರವನ್ನು ಸುಗಮಗೊಳಿಸಲಾಗಿತ್ತು. ಈ ಘಟನೆ ಬಳಿಕ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾಮಗಾರಿಯ ಮೇಲ್ವಿಚಾರಣೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸಂಸದ ಈ. ತುಕಾರಾಂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದರು.
ಇದರ ಬೆನ್ನಲ್ಲೇ ಸಂಸದ ಈ. ತುಕಾರಾಂ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಕಾಮಗಾರಿಯ ಗುಣಮಟ್ಟ, ರಸ್ತೆ ಕುಸಿತ ಹಾಗೂ ವಾಹನ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ಮುಂದಿಟ್ಟರು. ಪ್ರಶ್ನೋತ್ತರದ ಸಂದರ್ಭದಲ್ಲಿ ವಾತಾವರಣ ಕೆಲಕಾಲ ಉದ್ವಿಗ್ನಗೊಂಡಿದ್ದು, ಸ್ಥಳೀಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ವೇಳೆ ಸಂಸದರು ಆಕ್ರೋಶಗೊಂಡು ಕೆಲವು ಅಸಮಾಧಾನಕಾರಿ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಈ ಘಟನೆ ಅಲ್ಲಿದ್ದ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯಿತು.
ಬಳಿಕ ವಿಷಯದ ಕುರಿತು ಸ್ಪಷ್ಟನೆ ನೀಡಿದ ಸಂಸದ ಈ. ತುಕಾರಾಂ, ಪ್ರಶ್ನೆಯ ಉದ್ದೇಶ ಹಾಗೂ ಕಾಮಗಾರಿಯ ತಾಂತ್ರಿಕ ಅಂಶಗಳ ಬಗ್ಗೆ ಸರಿಯಾದ ಮಾಹಿತಿ ತಮಗೆ ಅಂದು ಲಭ್ಯವಾಗಿರಲಿಲ್ಲ, ಆ ಹಿನ್ನೆಲೆಯಲ್ಲಿ ಆ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಇನ್ನೊಂದೆಡೆ, ಸಂಸದರೊಂದಿಗೆ ಪ್ರಶ್ನೆ ಕೇಳಿದ್ದ ಸ್ಥಳೀಯ ವ್ಯಕ್ತಿಯೂ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಪ್ರಶ್ನೆ ಕೇಳಿದ ರೀತಿಯನ್ನು ಸಂಸದರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ತನ್ನ ಉದ್ದೇಶ ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನ ಸೆಳೆಯುವುದಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.






