ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಚಾಲಕರ ಆಕ್ರೋಶ: ಹೊಸಪೇಟೆಯಲ್ಲಿ ಪ್ರತಿಭಟನೆ

ಹೊಸಪೇಟೆ/ವಿಜಯನಗರ : ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ಸ್ (ಸಿ ಐ ಟಿ ಯು, AIRTWF ಸಂಯೋಜಿತ) ಹಾಗೂ ವಿಜಯನಗರ ಆಟೋ ಚಾಲಕರ ಸಂಘದ ಜಂಟಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಹೊಸಪೇಟೆಯಲ್ಲಿ ನೂರಾರು ಆಟೋರಿಕ್ಷಾಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು.
ಸಣ್ಣಕ್ಕೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿವರೆಗೆ ಮೆರವಣಿಗೆ ನಡೆಸಿದ ಚಾಲಕರು, ಬಳಿಕ ಆರ್‌ಟಿಒ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
ಸಭೆಯಲ್ಲಿ ಮಾತನಾಡಿದ ಫೆಡರೇಷನ್‌ನ ತಾಲೂಕು ಅಧ್ಯಕ್ಷ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಂತೋಷ್ ಕುಮಾರ್, ಹೊಸಪೇಟೆಯಲ್ಲಿ ರ್ಯಾಪಿಡೋ ಸೇರಿದಂತೆ ಕೆಲವು ಅಗ್ರಿಗೇಟರ್ ಆ್ಯಪ್‌ಗಳ ಮೂಲಕ ಖಾಸಗಿ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಅನಧಿಕೃತವಾಗಿ ಬಳಸಲಾಗುತ್ತಿದೆ. ಇದು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದ್ದು, ಇಂತಹ ವಾಹನಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಇಂಧನ ದರಗಳನ್ನು ಕಡಿಮೆ ಮಾಡದಿರುವುದು ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ತಂದಿದೆ. ಕೇಂದ್ರ ಸರ್ಕಾರ ತಕ್ಷಣ ಇಂಧನ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಹಿರಿಯ ಮೋಟಾರು ವಾಹನ ನಿರೀಕ್ಷಕ ಪ್ರದೀಪ್ ಹಡಗಲಿ, ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಪ್ರತಿಭಟನಾಕಾರರು ವಿಜಯನಗರ ಜಿಲ್ಲಾಧಿಕಾರಿಗಳು ಹಾಗೂ ಬಳ್ಳಾರಿ–ವಿಜಯನಗರ ಲೋಕಸಭಾ ಕ್ಷೇತ್ರದ ಸಂಸದ ಇ. ತುಕಾರಾಂ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೈ. ರಾಮಚಂದ್ರ ಬಾಬು, ಸಿ. ಗೋವಿಂದರಾಜ್, ತಿಪ್ಪೇಶ್, ಕೆ. ಕೈಲಾಶ್ ಮೂರ್ತಿ, ಎಸ್. ಅನಂತಶಯನ, ಹುಸೇನ್ ಸಾಬ್, ಹನುಮ ನಾಯಕ್, ಧನಂಜಯ್, ಸೈಯ್ಯದ್ ಭಾಷಾ, ಜಿ. ಸಿದ್ದಲಿಂಗೇಶ್, ಟಿ. ಚಂದ್ರಶೇಖರ್, ಸದಾನಂದ ಪಾಟೀಲ್, ರಾಘವೇಂದ್ರ, ವಿರುಪಾಕ್ಷಿ ಗೌಡ, ಶಿವಕುಮಾರ್ ಸೇರಿದಂತೆ ನೂರಾರು ಆಟೋರಿಕ್ಷಾ ಚಾಲಕರು ಪಾಲ್ಗೊಂಡಿದ್ದರು.






