ವಿಜಯನಗರ ಜಿಲ್ಲೆಗೆ ಜನಸಂಖ್ಯೆ ಆಧಾರಿತ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಿಡುಗಡೆಗೆ ಒತ್ತಾಯ

ಹೊಸಪೇಟೆ: ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಿಗೆ ದಲಿತ ಹಕ್ಕು ಸಮಿತಿ (DHS) ಮುಖಂಡರು ಸಮಗ್ರ ಮನವಿಯನ್ನು ಸಲ್ಲಿಸಿ, ಜಿಲ್ಲೆಯ ಜನಸಂಖ್ಯೆ ಆಧಾರದ ಮೇಲೆ ಅನುಸೂಚಿತ ಜಾತಿ ಉಪಯೋಜನೆ (SCSP) ಹಾಗೂ ಬುಡಕಟ್ಟು ಉಪಯೋಜನೆ (TSP) ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಸೂರ್ಯನಾರಾಯಣ ಕೆ. ಹಾಗೂ ಜೆ.ಎಂ. ಚನ್ನಬಸಯ್ಯ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಅಧಿನಿಯಮ–2013ರ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು.
ಮನವಿಯಲ್ಲಿ ವಿಜಯನಗರ ಜಿಲ್ಲೆಯ 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 14,04,009 ಆಗಿದ್ದು, ಅದರಲ್ಲಿ ಅನುಸೂಚಿತ ಜಾತಿಯ ಜನಸಂಖ್ಯೆ 3,24,689 (22.81%) ಹಾಗೂ ಅನುಸೂಚಿತ ಬುಡಕಟ್ಟು ಜನಸಂಖ್ಯೆ 2,51,301 (17.08%) ಇದೆ ಎಂದು ವಿವರಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಎಸ್‌ಸಿ/ಎಸ್‌ಟಿ ಜನಸಂಖ್ಯೆಯ ಪ್ರಮಾಣ ಹೆಚ್ಚಿರುವುದರಿಂದ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಭೂ ಒಡೆತನ ಯೋಜನೆ ಕುರಿತು ಮಾತನಾಡಿದ ಮುಖಂಡರು, ಭೂರಹಿತ ಎಸ್‌ಸಿ ಮತ್ತು ಎಸ್‌ಟಿ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಿ ನೀಡುವ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು. ವಿಜಯನಗರ ಜಿಲ್ಲೆಯಲ್ಲಿ ಗಣಿ ಮತ್ತು ಕೈಗಾರಿಕೆಗಳ ಪರಿಣಾಮ ಭೂಮಿಯ ದರ ಹೆಚ್ಚಿರುವುದರಿಂದ ಸರ್ಕಾರ ಭೂದರ ಮರುಪರಿಶೀಲನೆ ಮಾಡಿ ಫಲಾನುಭವಿಗಳಿಗೆ ಭೂಮಿ ಒದಗಿಸಬೇಕು ಎಂದು ಮನವಿ ಮಾಡಿದರು.
ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ 4876 ಅರ್ಜಿಗಳ ಪೈಕಿ ಬಹುಪಾಲು ಅರ್ಜಿಗಳು ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿದ ಅವರು, ನಿಯಮಾನುಸಾರ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಬಗರು ಹುಕ್ಕಂ ಹಾಗೂ ನಮೂನೆ–57 ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಕೂಡ ತ್ವರಿತವಾಗಿ ಇತ್ಯರ್ಥಗೊಳಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಿವೇಶನ ಮತ್ತು ವಸತಿ ಸಮಸ್ಯೆ ಗಂಭೀರವಾಗಿದ್ದು, ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟು ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ದೇವದಾಸಿ ವಿಮೋಚನ ಮಹಿಳೆಯರಿಗಾಗಿ ಹೊಸಪೇಟೆ ಜಂಬೂನಾಥನಹಳ್ಳಿ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಕೂಡ ಒತ್ತಾಯಿಸಲಾಗಿದೆ.
ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಪರಿಣಾಮಕಾರಿತ್ವ ಕುಂಠಿತವಾಗುವ ಆತಂಕ ವ್ಯಕ್ತಪಡಿಸಿದ ಮುಖಂಡರು, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ತೀರ್ಪಿನ ಮರುಪರಿಶೀಲನೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳು ಖುಲಾಸೆಯಾಗುತ್ತಿರುವ ಪ್ರಮಾಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದ್ದು, ಸಂತ್ರಸ್ತರಿಗೆ ನ್ಯಾಯ ಹಾಗೂ ರಕ್ಷಣೆ ಒದಗಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.






