ಹಂಪಿಯಲ್ಲಿ ಅನಧಿಕೃತ ಹೋಂ ಸ್ಟೇಗಳ ಹಾವಳಿ: ಕಟ್ಟುನಿಟ್ಟಿನ ಕ್ರಮಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಖಡಕ್ ಸೂಚನೆ

ವಿಜಯನಗರ: ವಿಶ್ವ ಪಾರಂಪರಿಕ ತಾಣ ಹಂಪಿಗೆ ಶನಿವಾರ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ, ಹಂಪಿ ಪ್ರದೇಶದಲ್ಲಿ ನಿಯಮಬಾಹಿರವಾಗಿ ಹಾಗೂ ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪರಿಶೀಲನೆ ವೇಳೆ ಸ್ಥಳೀಯವಾಗಿ ಸುಮಾರು 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಉಪ ಲೋಕಾಯುಕ್ತರ ಗಮನಕ್ಕೆ ಬಂದಿದ್ದು, ಯಾವುದೇ ಸೂಕ್ತ ಅನುಮತಿ, ಪಂಚಾಯತ್ ಪ್ರಾಧಿಕಾರದ ಪರವಾನಗಿ ಇಲ್ಲದೆ ಇಷ್ಟೊಂದು ಸಂಖ್ಯೆಯ ಹೋಂ ಸ್ಟೇಗಳು ಹೇಗೆ ನಡೆಯುತ್ತಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಅನಧಿಕೃತ ವಹಿವಾಟು ನಡೆಸಲು ಹೇಗೆ ಅವಕಾಶ ನೀಡಲಾಗಿದೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಏಕೆ ವಿಫಲರಾಗಿದ್ದಾರೆ ಎಂದು ಕಠಿಣವಾಗಿ ಪ್ರಶ್ನಿಸಿದರು. ಕೃಷಿ ಅಥವಾ ವಾಸಯೋಗ್ಯ ಭೂಮಿಯಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಉದ್ದೇಶದ ಹೋಂ ಸ್ಟೇಗಳನ್ನು ನಡೆಸುತ್ತಿರುವುದಕ್ಕೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಸೂಚಿಸಿದರು.
ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ತಕ್ಷಣವೇ ಪರಿಶೀಲನೆ ನಡೆಸಿ, ಅನಧಿಕೃತವಾಗಿ ನಡೆಯುತ್ತಿರುವ ಎಲ್ಲಾ ಹೋಂ ಸ್ಟೇಗಳ ಮೇಲೆ ಕಾನೂನುಬದ್ಧ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ತೆರವುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಹಂಪಿ ವಿಶ್ವವಿಖ್ಯಾತ ಪಾರಂಪರಿಕ ತಾಣವಾಗಿದ್ದು, ಇಲ್ಲಿ ಯಾವುದೇ ಅನಧಿಕೃತ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ನಿಯಮಾನುಸಾರದ ಪರವಾನಗಿ ಪಡೆದು ವ್ಯಾಪಾರ ಮಾಡಲು ಅಭ್ಯಂತರವಿಲ್ಲ, ಆದರೆ ಅನಧಿಕೃತ ಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತರು ಎಚ್ಚರಿಸಿ, ಅನಧಿಕೃತ ಹೋಂ ಸ್ಟೇಗಳನ್ನು ನಡೆಸಲು ಅವಕಾಶ ನೀಡಿದ ಪ್ರಾಧಿಕಾರಗಳ ಮೇಲೆ ಸುಮೋಟೊ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.
ಈ ವೇಳೆ ಹಂಪಿ ಜನತಾ ಸ್ಟ್ರೀಟ್ ಸ್ಥಳಕ್ಕೆ ಭೇಟಿ ನೀಡಿದ ಅವರು, ವಿಶ್ವ ಪಾರಂಪರಿಕ ಸ್ಥಳದ ಸುತ್ತಮುತ್ತ ಕಾನೂನು ಬಾಹಿರವಾಗಿ 100ಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುವ ಬಗ್ಗೆ ಕಂಡುಬಂದಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಲ್ಲಿನ ಜನರಿಗೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲು ಸೂಕ್ತ ಸ್ಥಳ ಗುರುತಿಸಿ ಇಲ್ಲಿನ ವ್ಯಾಪಾರಿಗಳಿಗೆ ಅವಕಾಶ ಕೊಟ್ಟು ಜನತಾ ಸ್ಟ್ರೀಟ್‌ನಲ್ಲಿ ಯಾವುದೇ ಕಾರಣಕ್ಕೂ ವ್ಯವಹಾರಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಉಪನಿಬಂಧಕ ಅರವಿಂದ್, ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿವೇಕಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






