ವಿಜಯನಗರ ಜಿಲ್ಲೆಯಲ್ಲಿ ಅಕ್ಕ ಪಡೆ ಯೋಜನೆಗೆ ಜಿಲ್ಲಾಧಿಕಾರಿಯಿಂದ ಚಾಲನೆ

ಹೊಸಪೇಟೆ (ವಿಜಯನಗರ): ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ನೆರವು ಹಾಗೂ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ಅಕ್ಕ ಪಡೆಗೆ ಚಾಲನೆ ನೀಡಲಾಯಿತು.
ನಗರದ ಜಿಲ್ಲಾ ಆಡಳಿತ ಕಚೇರಿಯ ಮುಂಭಾಗದಲ್ಲಿ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮಣ್ಣಿಕೇರಿ ಅವರು ಈ ವಿಶೇಷ ಪಡೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಯವರು, ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು 'ಅಕ್ಕ ಪಡೆ'ಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯದ ಸೇವೆಯ ಆಶಯದೊಂದಿಗೆ ಈ ಪಡೆ ರೂಪಿತವಾಗಿದ್ದು, ಸಮಾಜದಲ್ಲಿ ಸುರಕ್ಷತಾ ಘಟಕವಾಗಿ ಹಾಗೂ ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹಮ್ಮದ್ ಅಕ್ರಂ ಶಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್.ಜಾಹ್ನವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ವೇತಾ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







