ವಿಜಯನಗರ ಜಿಲ್ಲೆಗೆ ಜಿಲ್ಲಾ ಗ್ರಾಹಕರ ಆಯೋಗ ಮಂಜೂರು

ಹೊಸಪೇಟೆ/ ವಿಜಯನಗರ: ಜಿಲ್ಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (District Consumer Disputes Redressal Commission) ಸ್ಥಾಪನೆಗೆ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಅಧಿಕೃತ ಅನುಮೋದನೆ ದೊರೆತಿದ್ದು, ಜಿಲ್ಲೆಯ ಗ್ರಾಹಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದಂತೆ ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಗ್ರಾಹಕರ ಆಯೋಗವನ್ನು ಸ್ಥಾಪಿಸಿ, ಅದರ ಕಾರ್ಯನಿರ್ವಹಣೆಗೆ ಅಗತ್ಯವಾದ 13 ಹುದ್ದೆಗಳನ್ನು ಸೃಜಿಸಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಜಯನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಆಯೋಗ ಕಾರ್ಯಾರಂಭಿಸಲು ಅಗತ್ಯವಾದ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದೆ.
ಆಯೋಗದ ಕಾರ್ಯನಿರ್ವಹಣೆಗೆ ಸುಮಾರು 5,000 ರಿಂದ 6,000 ಚದರ ಅಡಿ ವಿಸ್ತೀರ್ಣದ ಕಟ್ಟಡ, ಪೀಠೋಪಕರಣಗಳು, ಗಣಕಯಂತ್ರಗಳು, ಪ್ರಿಂಟರ್‌ಗಳು, ಯುಪಿಎಸ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಪ್ರಸ್ತುತ ತಾತ್ಕಾಲಿಕವಾಗಿ ಖಾಸಗಿ ಕಟ್ಟಡದಲ್ಲಿ ಆಯೋಗವನ್ನು ಆರಂಭಿಸುವಂತೆ ಸೂಚನೆ ನೀಡಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನ್ಯಾಯಾಲಯದ ಬಾರ್ ಕೌನ್ಸಿಲ್ ಅಧ್ಯಕ್ಷರಾದ ಗುಜ್ಜಲ್ ನಾಗರಾಜ್ ಅವರು ಹಲವು ವರ್ಷಗಳಿಂದ ಜಿಲ್ಲೆಯ ಜನರಿಗೆ ಗ್ರಾಹಕರ ಆಯೋಗದ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ನಿರಂತರ ಹೋರಾಟ ನಡೆಸುತ್ತಿದ್ದರು. ಈ ಕುರಿತು ಅವರು ಈ ಹಿಂದೆ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗದ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಮಟಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿ, ವಿಜಯನಗರ ಜಿಲ್ಲೆಯಲ್ಲಿ ಪ್ರತ್ಯೇಕ ಗ್ರಾಹಕರ ಆಯೋಗ ಸ್ಥಾಪಿಸುವಂತೆ ಒತ್ತಾಯಿಸಿದ್ದರು.
ಮನವಿಗಳಿಗೆ ಸ್ಪಂದಿಸಿದ ಸರ್ಕಾರ ಹಾಗೂ ರಾಜ್ಯ ಗ್ರಾಹಕರ ಆಯೋಗ ಇದೀಗ ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಮಂಜೂರು ಮಾಡಿರುವುದು ಜಿಲ್ಲೆಯ ಜನತೆಗೆ ಸಂತಸದ ಸುದ್ದಿಯಾಗಿದೆ.
ಇದುವರೆಗೆ ಗ್ರಾಹಕರ ದೂರುಗಳು ಮತ್ತು ವ್ಯಾಜ್ಯಗಳ ವಿಚಾರಣೆಗೆ ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳ ಆಯೋಗಗಳಿಗೆ ತೆರಳಬೇಕಾಗಿದ್ದ ವಿಜಯನಗರ ಜಿಲ್ಲೆಯ ಸಾರ್ವಜನಿಕರಿಗೆ, ಇನ್ನು ಮುಂದೆ ತಮ್ಮ ಜಿಲ್ಲೆಯಲ್ಲಿಯೇ ನ್ಯಾಯ ದೊರಕುವಂತಾಗಲಿದೆ. ಇದರಿಂದ ಸಮಯ ಹಾಗೂ ಹಣದ ಉಳಿತಾಯವಾಗುವುದರ ಜೊತೆಗೆ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಬಲ ದೊರೆಯಲಿದೆ ಎಂದು ನಾಗರಾಜ್ ತಿಳಿಸಿದ್ದಾರೆ.
ಜಿಲ್ಲಾ ಗ್ರಾಹಕರ ಆಯೋಗ ಶೀಘ್ರದಲ್ಲೇ ಕಾರ್ಯಾರಂಭ ಮಾಡುವ ನಿರೀಕ್ಷೆ ಇದ್ದು, ಜಿಲ್ಲಾಡಳಿತವು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.






