ಹೊಸಪೇಟೆ | ಜೋಡಿ ಕೊಲೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ, 1 ಲಕ್ಷ ರೂ ದಂಡ

ಸಾಂದರ್ಭಿಕ ಚಿತ್ರ
ಹೊಸಪೇಟೆ: ಜೋಡಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಸ್ಥಳೀಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ, ಮಹತ್ವದ ತೀರ್ಪು ನೀಡಿದೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ದೊಡ್ಡಗೊಲ್ಲರಹಟ್ಟಿ ಗ್ರಾಮದ ವ್ಯಾಪ್ತಿಯಲ್ಲಿನ ಚಿರಬಿ ಅರಣ್ಯ ಪ್ರದೇಶದ ಮಸಕಲ್ಲುಬಂಡಿ ಹಳ್ಳದ ಹತ್ತಿರ 2019 ನವಂಬರ್ 4 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಆರೋಪಿ ಕೂಡ್ಲಿಗಿ ತಾಲೂಕಿನ ದೊಡ್ಡಗೊಲ್ಲರಹಟ್ಟಿ ಗ್ರಾಮದ ನಿವಾಸಿ ಮಹಾಲಿಂಗ, ತನ್ನ ಹೆಂಡತಿಯ ಶೀಲದ ಬಗ್ಗೆ ಸಂಶಯಗೊಂಡು, ತನ್ನ ಹೆಂಡತಿ ಸುಜಾತ ಹಾಗೂ ಆಕೆಯೊಂದಿಗೆ ಇದ್ದ ಎಂ.ಮಂಜುನಾಥ ಎಂಬಾತನನ್ನು ಕಲ್ಲಿನಿಂದ ತಲೆಗೆ ಒಡೆದು ಕೊಲೆ ಮಾಡಿದ್ದ.
ಈ ಕುರಿತು ಮೃತ ಎಂ.ಮಂಜುನಾಥನ ಅಣ್ಣ ದೊಡ್ಡ ನಾಗಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಅಂದಿನ ತನಿಖಾಧಿಕಾರಿ ತಿಮ್ಮಣ್ಣ ಎಸ್.ಚಾಮನೂರು ಹಾಗೂ ನಂತರ ಬಂದ ತನಿಖಾಧಿಕಾರಿ ಪಂಪನಗೌಡ ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿತನ ವಿರುದ್ದ ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಪಿ.ಕುಮಾರಸ್ವಾಮಿ ರವರು, ಪ್ರಕರಣದಲ್ಲಿ ಆರೋಪಿತನು ಕೊಲೆ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಮಹಾಲಿಂಗ ನಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ, ಶುಕ್ರವಾರ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಮೃತ ಮಂಜುನಾಥನ ವಾರಸುದಾರರಿಗೆ 40 ಸಾವಿರ, ಮೃತ ಸುಜಾತ ವಾರಸುದಾರರಿಗೆ 40 ಸಾವಿರ ಪರಿಹಾರ ನೀಡುವಂತೆ ಹಾಗೂ 20 ಸಾವಿರ ರೂ ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆ ತಮ್ಮ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ.ಅಂಬಣ್ಣ ವಾದ ಮಂಡಿಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.







