ಹೊಸಪೇಟೆಯಲ್ಲಿ ಸಂಭ್ರಮದ ಮೀಲಾದುನ್ನೆಬಿ ಆಚರಣೆ
ಮಾಧ್ಯಮ ಸೇವೆಗೆ ಮೊಹಮ್ಮದ್ ಗೌಸ್ ಅವರಿಗೆ ಸನ್ಮಾನ

ಹೊಸಪೇಟೆ/ವಿಜಯನಗರ: ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ (ಸ.ಅ.) ಅವರ ಜನ್ಮದಿನದ ಅಂಗವಾಗಿ ಮೀಲಾದುನ್ನೆಬಿ ನಗರದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಈದ್ ಮಿಲಾದ್ ಕಮಿಟಿಯ ಅಧ್ಯಕ್ಷರಾದ ಬಡವಲಿ, ಕಾರ್ಯದರ್ಶಿ ಸೈಯದ್ ಅಬ್ದುಲ್ ಖಾದರ್ ರಫ್ಫಾಯಿ, ಗುಜುರಿ ಶಾಶು, ಶಂಷುದ್ದೀನ್ ಸೇರಿದಂತೆ ಕಮಿಟಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಮಸೀದಿಗಳ ಮುಖಂಡರು, ಧಾರ್ಮಿಕ ಮುಖಂಡರು, ನಗರಸಭಾ ಸದಸ್ಯರು ಹಾಗೂ ನೂರಾರು ಮುಸ್ಲಿಮರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಳ್ಳಾರಿಯಿಂದ ಆಗಮಿಸಿದ್ದ ಮುಫ್ತಿ ಅಹಮದ್ ಸಾಬ್ ಅವರು ವಿಶೇಷ ಪ್ರವಚನ ನೀಡಿದರು. ಮೆಹಬೂಬ್ ಪೀರ್ ಅವರು ಉಪಸ್ಥಿತರಿದ್ದರು. ಪ್ರವಚನದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ.) ಅವರ ಜೀವನ, ಸರಳತೆ, ಮಾನವೀಯತೆ, ಸತ್ಯ, ನ್ಯಾಯ, ಸಹೋದರತ್ವ ಹಾಗೂ ಪರಸ್ಪರ ಗೌರವದ ಸಂದೇಶಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಅವರ ಪುತ್ರ ಎಚ್.ಜಿ. ಗುರುದತ್, ಸಿಎ ಮೊಹಮ್ಮದ್, ಇಮಾಮ್ ನಿಯಾಜಿ ಸೇರಿದಂತೆ ನಗರಸಭಾ ಸದಸ್ಯರು, ವಿವಿಧ ಮಸೀದಿಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಈದ್ ಮಿಲಾದ್ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಡಗರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ಹಾಗೂ ಗಣ್ಯರ ಸನ್ಮಾನ ಕಾರ್ಯಕ್ರಮ ಜರುಗಿತು.
ಮಾಧ್ಯಮ ಸೇವೆಗೆ ಮೊಹಮ್ಮದ್ ಗೌಸ್‌ಗೆ ಗೌರವ:
ಇತ್ತೀಚೆಗೆ ರಾಜ್ಯ ಮಟ್ಟದ ‘ಮಾಧ್ಯಮ ರತ್ನ’ ಪ್ರಶಸ್ತಿ ಪಡೆದ ‘ವಾರ್ತಾಭಾರತಿ’ ಪತ್ರಿಕೆಯ ಜಿಲ್ಲಾ ವರದಿಗಾರ ಮೊಹಮ್ಮದ್ ಗೌಸ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಮಸೀದಿಗಳ ಮುಖಂಡರು, ಧಾರ್ಮಿಕ ಗಣ್ಯರು, ನಗರಸಭಾ ಸದಸ್ಯರು, ಕಮಿಟಿಯ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.






