ಕೂಡ್ಲಿಗಿಯಲ್ಲಿ 16.50 ಕೋಟಿ ರೂ. ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆಗೆ ಜೂ.30ರಂದು ಶಂಕುಸ್ಥಾಪನೆ

ಕೂಡ್ಲಿಗಿ/ವಿಜಯನಗರ : ತಾಲೂಕಿನ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ನಾಳೆ ಶಂಕುಸ್ಥಾಪನೆ ನೆರವೇರಲಿದೆ. 16.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಹತ್ವಾಕಾಂಕ್ಷೆಯ ಯೋಜನೆ, ಈ ಭಾಗದ ಆರೋಗ್ಯ ಸೇವೆಯಲ್ಲಿ ಮಹತ್ವದ ಬದಲಾವಣೆ ತರಲಿದೆ.
ಪ್ರಸ್ತುತ ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯು 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಇದೀಗ ಅದನ್ನು 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಹೆಚ್ಚುವರಿ 50 ಹಾಸಿಗೆಗಳನ್ನು ವಿಶೇಷವಾಗಿ ತಾಯಿ ಮತ್ತು ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗುತ್ತಿದೆ.
ಈ ಆಸ್ಪತ್ರೆಯ ನಿರ್ಮಾಣದಿಂದ ಕೂಡ್ಲಿಗಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದುವರೆಗೆ ಸುಸಜ್ಜಿತ ಹೆರಿಗೆ ಆಸ್ಪತ್ರೆಯ ಕೊರತೆಯಿಂದಾಗಿ ಬಡ ರೋಗಿಗಳು ತುರ್ತು ಚಿಕಿತ್ಸೆಗೆ ಹೊಸಪೇಟೆ, ಚಿತ್ರದುರ್ಗ ಹಾಗೂ ಕೊಪ್ಪಳದಂತಹ ದೂರದ ನಗರಗಳಿಗೆ ತೆರಳಬೇಕಾಗುತ್ತಿತ್ತು.
ಸ್ವತಃ ವೈದ್ಯರಾಗಿರುವ ಶಾಸಕ ಡಾ. ಶ್ರೀನಿವಾಸ್ ಅವರು, ಜನರ ಆರೋಗ್ಯ ಹಿತದೃಷ್ಟಿಯಿಂದ ಹಾಗೂ ಬಡ ಕುಟುಂಬಗಳ ಸಮಸ್ಯೆಯನ್ನು ಅರಿತು ಈ ಯೋಜನೆಗೆ ವಿಶೇಷ ಆದ್ಯತೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಆರೋಗ್ಯ ಕೇಂದ್ರದ ಇತಿಹಾಸವನ್ನು ಗಮನಿಸಿದರೆ, 1994ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಗಫೂರ್ ಸಾಬ್ ಅವರು ದಾನವಾಗಿ ನೀಡಿದ ಜಾಗದಲ್ಲಿ 30 ಹಾಸಿಗೆಗಳ ಆಸ್ಪತ್ರೆಯಾಗಿ ಆರಂಭವಾಗಿತ್ತು. ನಂತರ ವಿವಿಧ ಹಂತಗಳಲ್ಲಿ ಅಭಿವೃದ್ಧಿಗೊಂಡು 100 ಹಾಸಿಗೆಗಳ ಆಸ್ಪತ್ರೆಗೆ ಮೇಲ್ದರ್ಜೆಗೇರಿತ್ತು. ಇದೀಗ 150 ಹಾಸಿಗೆಗಳಿಗೆ ವಿಸ್ತರಣೆಗೊಳ್ಳುತ್ತಿರುವುದರ ಜೊತೆಗೆ ತಾಯಿ-ಮಕ್ಕಳ ಆಸ್ಪತ್ರೆಯಾಗಿ ರೂಪುಗೊಳ್ಳುತ್ತಿರುವುದು ಈ ಭಾಗದ ಜನರ ಬಹುದಿನಗಳ ಕನಸಿಗೆ ಸಾಕಾರವಾಗಿದೆ.
ಆಸ್ಪತ್ರೆ ನಿರ್ಮಾಣಗೊಳ್ಳಲಿರುವ ಸ್ಥಳವನ್ನು ಶಾಸಕ ಡಾ. ಶ್ರೀನಿವಾಸ್ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ದಂಡಾಧಿಕಾರಿ ಕೆ.ವಿ. ನೇತ್ರಾವತಿ, ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವಪ್ಪ ನಾಯಕ, ಗೌಡರ ಮಲ್ಲಿಕಾರ್ಜುನ ಸೇರಿದಂತೆ ಹಲವು ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.






