ಹರಪನಹಳ್ಳಿಯಲ್ಲಿ ಉಚಿತ ಕಣ್ಣು, ಹೃದಯ ತಪಾಸಣಾ ಶಿಬಿರ

ಹರಪನಹಳ್ಳಿ: ಪಟ್ಟಣದ ಎಡಿಬಿ ಮತ್ತು ಎಸ್‌ಎಸ್‌ಎಚ್ ಜೈನ್ ಕಾಲೇಜಿನಲ್ಲಿ ‘ಸುರ ಸಂಭ್ರಮ’ ಕಾರ್ಯಕ್ರಮದ ಅಂಗವಾಗಿ ಬುಧವಾರ ಬೃಹತ್ ಉಚಿತ ಕಣ್ಣು ಮತ್ತು ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಾಗೂ ಎನ್‌ಸಿಸಿ ಘಟಕಗಳು, ಶಿವಮೊಗ್ಗದ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ, ಹರಪನಹಳ್ಳಿಯ ಉತ್ತಂಗಿ ಕಬ್ಬಿಣ ಕಂತಿ ಮಠದ ಶಾಂತಮ್ಮ ವೀರಯ್ಯ ಟ್ರಸ್ಟ್ ಹಾಗೂ ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರ ನಡೆಯಿತು.
ಹರಪನಹಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ನೂರಾರು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು. 130ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ, 60ಕ್ಕೂ ಹೆಚ್ಚು ಮಂದಿ ಹೃದಯ ತಪಾಸಣೆಗೆ ಒಳಗಾಗಿ ವೈದ್ಯರಿಂದ ಅಗತ್ಯ ಸಲಹೆ ಪಡೆದರು.
ನೇತ್ರ ತಪಾಸಣೆಯ ಬಳಿಕ 55 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರ ತಂಡ ದೃಢಪಡಿಸಿತು. ಈ ಎಲ್ಲ 55 ಫಲಾನುಭವಿಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ಉಚಿತ ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ರೇಶ್ವರ, ಸದಸ್ಯರಾದ ವೀರಭದ್ರಯ್ಯ, ಆರುಂಡಿ ನಾಗರಾಜ, ಪ್ರಾಚಾರ್ಯರಾದ ಡಾ. ಎಸ್.ಎಂ. ಸಿದ್ದಲಿಂಗಮೂರ್ತಿ, ಡಾ. ಶರತ್, ಎನ್‌ಎಸ್‌ಎಸ್ ಅಧಿಕಾರಿಗಳಾದ ನವಾಜ್ ಬಾಷಾ, ಡಾ. ಅಣ್ಣೇಶ, ಎನ್‌ಸಿಸಿ ಅಧಿಕಾರಿ ಬಸವಲಿಂಗಪ್ಪ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.






