ಅವಳಿ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಿ : ಕಾಂಗ್ರೆಸ್ ಹೈಕಮಾಂಡ್‌ಗೆ ಶಾಸಕ ಗವಿಯಪ್ಪ ಮನವಿ

ಹೊಸಪೇಟೆ : ಬಳ್ಳಾರಿ–ವಿಜಯನಗರ ಅವಳಿ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ ಎಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗವಿಯಪ್ಪ ತಿಳಿಸಿದ್ದಾರೆ.
ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಸೇರಿ ಕನಿಷ್ಠ ಒಂದು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಎರಡೂ ಜಿಲ್ಲೆಗಳ ಪೈಕಿ ಯಾರಿಗಾದರೂ ಸಚಿವ ಸ್ಥಾನ ನೀಡಿದರೆ ಈ ಭಾಗದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲೆಗೆ ಸಚಿವ ಸ್ಥಾನ ನೀಡಿದರೆ ಇನ್ನೂ ಉತ್ತಮ. ಸ್ಥಳೀಯ ಸಮಸ್ಯೆಗಳು, ಜನರ ಅಗತ್ಯತೆಗಳು ಹಾಗೂ ಅಭಿವೃದ್ಧಿಯ ಆದ್ಯತೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹೆಚ್ಚು ಅರಿವು ಇರುತ್ತದೆ. ಆದ್ದರಿಂದ ಈ ಭಾಗಕ್ಕೆ ಸಚಿವ ಸ್ಥಾನ ನೀಡುವುದು ಅಗತ್ಯ ಎಂದು ಒತ್ತಾಯಿಸಿದರು.
ಸಚಿವ ಸ್ಥಾನ ಹಂಚಿಕೆ ವಿಚಾರವಾಗಿ ಸಚಿವ ರಾಮಲಿಂಗ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ವಿಷಯಗಳನ್ನು ಕಾಂಗ್ರೆಸ್ ಹೈಕಮಾಂಡ್ ಸಮರ್ಥವಾಗಿ ನಿರ್ವಹಿಸುತ್ತದೆ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ನಾಯಕತ್ವ ಅವುಗಳನ್ನು ಬಗೆಹರಿಸುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ನಾಗೇಂದ್ರ ಕುರಿತು ಮಾತನಾಡಿದ ಗವಿಯಪ್ಪ, ನಾಗೇಂದ್ರ ಅವರ ವಿರುದ್ಧ ಆರೋಪಗಳಿದ್ದರೂ ಅವರು ಆರೋಪಮುಕ್ತರಾಗುವ ವಿಶ್ವಾಸವಿದೆ. ಅವರು ಉತ್ತಮ ವ್ಯಕ್ತಿಯಾಗಿದ್ದು, ಅವರ ಕಾರ್ಯಕ್ಷಮತೆಯ ಆಧಾರದ ಮೇಲೆಯೇ ಈ ಹಿಂದೆ ಸಚಿವ ಸ್ಥಾನ ನೀಡಲಾಗಿತ್ತು ಎಂದು ಅಭಿಪ್ರಾಯಪಟ್ಟರು.
ಸಚಿವ ಸಂಪುಟ ವಿಸ್ತರಣೆ ವೇಳೆ ಅವಳಿ ಜಿಲ್ಲೆಗಳ ಜನರ ಆಶಯಕ್ಕೆ ಸ್ಪಂದಿಸಿ ಈ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಗವಿಯಪ್ಪ ಆಗ್ರಹಿಸಿದರು.






