ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಕೆ.ಎಸ್.ಬಸವಂತಪ್ಪ

ವಿಜಯನಗರ (ಹೊಸಪೇಟೆ) : ಹೈದರಾಬಾದ್ ನಿಜಾಮರ ದಬ್ಬಾಳಿಕೆಯ ಆಡಳಿತದಿಂದ ಕಲ್ಯಾಣ ಕರ್ನಾಟಕ ಭಾಗ ವಿಮೋಚನೆಗೊಂಡು 79 ವರ್ಷಗಳು ಪೂರ್ಣಗೊಂಡ ಸಂಭ್ರಮದ ನೆನಪಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.
ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಭಾಗದ ಜನರಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಭಾರತ ಒಕ್ಕೂಟಕ್ಕೆ ವಿಲೀನಗೊಳ್ಳುವ ಉದ್ದೇಶದಿಂದ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಈ ಭಾಗದಲ್ಲಿ ಅಹಿಂಸಾತ್ಮಕ ಹೋರಾಟ ಆರಂಭವಾಯಿತು ಎಂದು ಅವರು ಹೇಳಿದರು.
ಸ್ವಾಮಿ ರಮಾನಂದ ತೀರ್ಥ, ಡಾ. ಮೇಲ್ಕೋಟೆ, ಅನ್ನದಾನಯ್ಯ ಪುರಾಣಿಕ, ಪ್ರಭುರಾಜ್ ಪಾಟೀಲ್, ಶಿವಮೂರ್ತಿಸ್ವಾಮಿ ಅಳವಂಡಿ, ಡಾ. ಚುರ್ಚಿ, ಭೀಮಸೇನರಾವ್, ಶ್ರೀನಿವಾಸಾಚಾರ್, ಹನುಮಂತರಾವ್ ಸೇರಿದಂತೆ ಅನೇಕ ನಾಯಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸ್ಮರಿಸಿದರು.
ಭಾರತದ ಮೊದಲ ಉಪಪ್ರಧಾನಿ ಹಾಗೂ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1948ರ ಸೆಪ್ಟೆಂಬರ್ 13ರಂದು ಆಪರೇಷನ್ ಪೋಲೋ ಕಾರ್ಯಾಚರಣೆಗೆ ಆದೇಶ ನೀಡಿದರು. ಜನರಲ್ ಜೆ.ಎನ್. ಚೌಧರಿ ನೇತೃತ್ವದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯ ಬಳಿಕ ನಿಜಾಮ ಶರಣಾಗಿ, 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟಕ್ಕೆ ವಿಲೀನಗೊಂಡಿತು ಎಂದು ವಿವರಿಸಿದರು.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನದ 371(ಜೆ) ತಿದ್ದುಪಡಿ ಜಾರಿಗೆ ತರಲಾಗಿದ್ದು, ಈ ಮೂಲಕ ಏಳು ಜಿಲ್ಲೆಗಳ ಸ್ಥಳೀಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ದೊರೆತಿದೆ. 2013ರಲ್ಲಿ ಸ್ಥಾಪನೆಯಾದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಈ ಭಾಗದ ಮೂಲಸೌಕರ್ಯ, ರಸ್ತೆ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆದವು. ಶ್ರೀಕರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ದೇವಿಶ್ರೀ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಮತ್ತು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹೈದರಾಬಾದ್ ಕರ್ನಾಟಕ ವಿಮೋಚನೆಯ ಇತಿಹಾಸವನ್ನು ಕಿರು ನಾಟಕದ ಮೂಲಕ ಮನಮುಟ್ಟುವಂತೆ ಪ್ರದರ್ಶಿಸಿದರು.
ಪರೇಡ್ ಕಮಾಂಡರ್ ಗೋವಿಂದ ನೇತೃತ್ವದಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಪೊಲೀಸ್ ಪಡೆ, ಮಹಿಳಾ ಪೊಲೀಸ್ ಪಡೆ, ಹೋಮ್‌ಗಾರ್ಡ್ ಹಾಗೂ ಲಿಟ್ಲ್ ಫ್ಲವರ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಪಡೆಗಳು ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿ ಗೌರವ ವಂದನೆ ಸಲ್ಲಿಸಿದವು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ್ ನಾಯ್ಕ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಒ ಗರಿಮಾ ಪನ್ವರ್, ಎಸ್‌ಪಿ ಜಾಹ್ನವಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






