ಫೆ.13 ರಿಂದ 15 ರವರೆಗೆ ಅದ್ದೂರಿ ಹಂಪಿ ಉತ್ಸವ; ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲು ನಿರ್ಧಾರ : ಡಿಸಿ ಕವಿತಾ ಎಸ್. ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ವಿಶ್ವವಿಖ್ಯಾತ ಹಂಪಿ ಉತ್ಸವವು ಫೆ.13 ರಿಂದ 15 ರವರೆಗೆ ನಡೆಯಲಿದ್ದು, ಈ ಬಾರಿ ಸ್ಥಳೀಯ ಕಲಾವಿದರು, ಸಂಗೀತ, ಸಾಂಸ್ಕೃತಿಕ ತಂಡಗಳು ಹಾಗೂ ವಿವಿಧ ಕಲಾ ಪ್ರಕಾರಗಳಿಗೆ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ಥಳೀಯ ಕಲಾವಿದರು ಹಾಗೂ ಸಂಘ-ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯ ಉತ್ಸವವನ್ನು ಕಳೆದ ವರ್ಷಕ್ಕಿಂತಲೂ ವಿಭಿನ್ನವಾಗಿ ಮತ್ತು ಅದ್ದೂರಿಯಾಗಿ ಆಯೋಜಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಮಾತನಾಡಿ, ಹಿಂದೆ ಸೌಲಭ್ಯಗಳು ಕಡಿಮೆ ಇದ್ದರೂ ಉತ್ಸವ ಅರ್ಥಪೂರ್ಣವಾಗಿ ನಡೆಯುತ್ತಿತ್ತು. ಆದರೆ ಇಂದು ಕೇವಲ ಸಿನಿಮಾ ತಾರೆಯರಿಗೆ ಮತ್ತು ಖ್ಯಾತನಾಮರಿಗೆ ಮಾತ್ರ ಮುಖ್ಯ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಈ ಭೇದಭಾವ ತೊರೆದು ಸ್ಥಳೀಯ ಕಲಾವಿದರಿಗೂ ಮುಖ್ಯ ವೇದಿಕೆಯಲ್ಲಿ ಸಮಾನ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ವಿಶೇಷ ಚೇತನರಿಗಾಗಿ ಪಾರ್ಕಿಂಗ್ ಮತ್ತು ಮುಖ್ಯ ವೇದಿಕೆಗೆ ತೆರಳಲು ಸಾರಿಗೆ ಸೌಲಭ್ಯ ಕಲ್ಪಿಸಬೇಕು ಹಾಗೂ ವಿಶೇಷ ಚೇತನ ಮತ್ತು ಅಂಧ ಕಲಾವಿದರಿಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ಎಲ್‌ಇಡಿ ಪರದೆ ಅಳವಡಿಕೆ ಮತ್ತು ಸಾರಿಗೆ ವ್ಯವಸ್ಥೆಯ ಬಗ್ಗೆ ಗಮನಹರಿಸುವುದಾಗಿ ತಿಳಿಸಿದರು.
ಕಲಾವಿದರಿಗೆ ಮುಂಗಡ ಸಂಭಾವನೆ ನೀಡುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, "ಉತ್ಸವಕ್ಕಾಗಿ ಸರ್ಕಾರಕ್ಕೆ 22 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಅನುದಾನದ ಕೊರತೆಯಿರುವುದರಿಂದ ಮುಂಗಡ ಪಾವತಿ ಸಾಧ್ಯವಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ ಸಂಪೂರ್ಣ ಸಂಭಾವನೆಯನ್ನು ಏಕಕಂತಿನಲ್ಲಿ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನಶಿಸಿ ಹೋಗುತ್ತಿರುವ ತೊಗಲು ಬೊಂಬೆಯಾಟ, ಸೂತ್ರದ ಬೊಂಬೆಯಾಟ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಪ್ರತ್ಯೇಕ ವೇದಿಕೆ ಒದಗಿಸಬೇಕು ಹಾಗೂ ಸಾವಯವ ಕೃಷಿ ಪ್ರದರ್ಶನ ಆಯೋಜಿಸಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದವು. ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವಂತೆ ಸದಸ್ಯರು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಸಭೆಯಲ್ಲಿ ವ್ಯಕ್ತವಾದ ಎಲ್ಲಾ ನೈಜ ಸಲಹೆಗಳನ್ನು ಪರಿಗಣಿಸಿ, ಸರ್ಕಾರದ ಮಿತಿಯೊಳಗೆ ಅತ್ಯುತ್ತಮವಾಗಿ ಉತ್ಸವ ನಡೆಸುವ ಭರವಸೆ ನೀಡಿದರು. ಸಭೆಯಲ್ಲಿ ಜಿ.ಪಂ. ಸಿಇಓ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಂ ಷಾ, ಉಪವಿಭಾಗಾಧಿಕಾರಿ ವಿವೇಕಾನಂದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







