Harapanahalli | ಸೆ.3-4ರಂದು ಎಡಿಬಿ ಕಾಲೇಜು ಸುವರ್ಣ, ಎಸ್‌ಎಸ್‌ಎಚ್ ಜೈನ್ ಪಿಯು ಕಾಲೇಜು ರಜತ ಮಹೋತ್ಸವ

ಹರಪನಹಳ್ಳಿ: ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಸ್ಥಳೀಯ ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಸುವರ್ಣ ಮಹೋತ್ಸವ ಹಾಗೂ ಎಸ್‌ಎಸ್‌ಎಚ್ ಜೈನ್ ಪಿಯು ಕಾಲೇಜಿನ ರಜತ ಮಹೋತ್ಸವವನ್ನು ಸೆಪ್ಟೆಂಬರ್ 3 ಮತ್ತು 4ರಂದು ‘ಸುರಸಂಭ್ರಮ’ ಹೆಸರಿನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ರೇಶ್ವರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಡಿಬಿ ಪ್ರಥಮ ದರ್ಜೆ ಕಾಲೇಜು 50 ವರ್ಷ ಹಾಗೂ ಎಸ್‌ಎಸ್‌ಎಚ್ ಜೈನ್ ಪಿಯು ಕಾಲೇಜು 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಎರಡೂ ಸಂಸ್ಥೆಗಳ ಮಹೋತ್ಸವವನ್ನು ಜಂಟಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸೆಪ್ಟೆಂಬರ್ 3ರಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಉಜ್ಜಯಿನಿ ಶ್ರೀಗಳ ಸಾನ್ನಿಧ್ಯದಲ್ಲಿ ಹಾಗೂ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಜಾನಪದ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ವಚನ ಗಾಯನ, ಗಿರಿಜಾ ಕಲ್ಯಾಣ ಬಯಲಾಟ, ಸಾಹಿತ್ಯ ಗೋಷ್ಠಿ, ಜಾನಪದ ಹಾಗೂ ಹಾಸ್ಯ ಕಾರ್ಯಕ್ರಮಗಳು ನಡೆಯಲಿವೆ. ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇಗೌಡ, ರಾಘವೇಂದ್ರ, ಪ್ರವೀಣ್ ಜೈನ್ ಹಾಗೂ ಮಿಮಿಕ್ರಿ ಗೋಪಿ ತಂಡದಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆಪ್ಟೆಂಬರ್ 4ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ. ಮಂಜುನಾಥ ಸಮಾರೋಪ ಭಾಷಣ ಮಾಡಲಿದ್ದಾರೆ. ಲಿಂಗನಾಯಕನಹಳ್ಳಿ ಹಾಗೂ ಕೊಟ್ಟೂರು ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಕೊಪ್ಪಳದ ಗವಿಮಠದ ಶ್ರೀಗಳು ಪ್ರವಚನ ನೀಡಲಿದ್ದಾರೆ.
ಸೆಪ್ಟೆಂಬರ್ 3ರಂದು ಬೆಳಿಗ್ಗೆ ನಗರದ ಹಳೆ ಬಸ್ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದಿಂದ ಕಾಲೇಜಿನವರೆಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದ ಸವಿನೆನಪಿಗಾಗಿ ‘ಬೆಸುಗೆ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು.
ಇದರೊಂದಿಗೆ ಕೃಷಿ ಗೋಷ್ಠಿ, ಕೃಷಿ ಸಲಕರಣೆಗಳ ಪ್ರದರ್ಶನ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಭಾಗವಹಿಸುವಿಕೆ ಇರಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಆಗಸ್ಟ್ 25 ಅಥವಾ 26ರಂದು ಆರೋಗ್ಯ ಮೇಳವನ್ನು ಸಹ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಪಾಟೀಲ್ ಜಗದೀಶಗೌಡ್ರು, ಆರುಂಡಿ ನಾಗರಾಜ, ಎಸ್.ಎಂ. ವೀರಭದ್ರಯ್ಯ, ಮಾಜಿ ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ಅಂಬ್ಲಿ ಮಂಜುನಾಥ, ಪದವಿ ಕಾಲೇಜಿನ ಪ್ರಾಚಾರ್ಯ ಸಿದ್ದಲಿಂಗಮೂರ್ತಿ ಹಾಗೂ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಶರತ್ ಉಪಸ್ಥಿತರಿದ್ದರು.






