Harapanahalli | ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಿರಂತರ ಜಾಗೃತಿ ಅಗತ್ಯ: ಪಿಎಸ್‌ಐ ನಾಗರತ್ನಮ್ಮ

ಹರಪನಹಳ್ಳಿ : ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಮಾರಕವಾಗಿದ್ದು, ಅದರ ನಿರ್ಮೂಲನೆಗಾಗಿ ನಿರಂತರ ಜಾಗೃತಿ ಮೂಡಿಸುವುದು ಅತ್ಯವಶ್ಯಕ ಎಂದು ಚಿಗಟೇರಿ ಪೊಲೀಸ್ ಠಾಣೆಯ ಪಿಎಸ್‌ಐ ಕೆ. ನಾಗರತ್ನಮ್ಮ ಹೇಳಿದರು.
ತಾಲೂಕಿನ ಹಗರಿ ಗಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾವೈಕ್ಯತೆ ಸಮಾಜಮುಖಿ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದ್ದು, ಪೋಷಕರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಶಾಲೆಯಿಂದ ಹೊರಗಿಡದೆ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದು, ಅದನ್ನು ತೊಡೆದುಹಾಕಲು ಸಮಾಜದ ಎಲ್ಲ ವರ್ಗಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಭಾವೈಕ್ಯತೆ ಸಮಾಜಮುಖಿ ಟ್ರಸ್ಟ್‌ನ ಬಿ. ಭಾಗ್ಯ ಮಾತನಾಡಿ, 18ನೇ ಶತಮಾನದ ಅಂತ್ಯ ಹಾಗೂ 19ನೇ ಶತಮಾನದ ಆರಂಭದಲ್ಲಿ ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇಂದಿಗೂ ಕೆಲವು ಕಡೆಗಳಲ್ಲಿ ಮುಂದುವರಿದಿದೆ. ಮಕ್ಕಳನ್ನು ದುಡಿಮೆಗೆ ತಳ್ಳುವ ಬದಲು ಶಿಕ್ಷಣದತ್ತ ಕೊಂಡೊಯ್ಯುವ ಮೂಲಕ ಅವರ ಉಜ್ವಲ ಭವಿಷ್ಯ ನಿರ್ಮಿಸಲು ಪೋಷಕರು ಮುಂದಾಗಬೇಕು ಎಂದು ಹೇಳಿದರು.
ಬಳಿಗನೂರು ಕೊಟ್ರೇಶ್ ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ, ಶಿಕ್ಷಣದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ, ಶಿಕ್ಷಕರು, ಸಿಬ್ಬಂದಿ, ಭಾವೈಕ್ಯತೆ ಸಮಾಜಮುಖಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






