Harapanahalli | ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ

ಹರಪನಹಳ್ಳಿ : ವಿದ್ಯುತ್ ಖಾಸಗೀಕರಣ, ಟಾಟಾ ಪವರ್ ಕಂಪನಿಗೆ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಹಾಗೂ ರೈತರಿಗೆ ಯೂರಿಯಾ ಮತ್ತು ರಸಗೊಬ್ಬರಗಳ ಬೆಲೆ ಕಡಿತಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಿ. ರತ್ನಮ್ಮ ಮತ್ತು ಹೋಬಳಿ ಘಟಕದ ಅಧ್ಯಕ್ಷ ಅರಸೀಕೆರೆ ಹೇಮಂತ್, ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಹೆಚ್ಚುವರಿ ಹೊರೆ ಬೀಳಲಿದ್ದು, ಸರ್ಕಾರ ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ಘಟಕದ ಉಪಾಧ್ಯಕ್ಷೆ ಕೆ. ರೂಪ, ಕಾರ್ಯದರ್ಶಿ ನಿಂಗಮ್ಮ, ನಾಗರತ್ನ, ಆರ್. ಹನುಮಂತ, ಟಿ. ದುರುಗಪ್ಪ, ನಾಗಮ್ಮ, ಭೋವಿ ನಾಗಮ್ಮ, ಶಿರೀನ್, ನಂದಿನಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.




