ಹರಪನಹಳ್ಳಿ | ಸಿಂಗ್ರಿಹಳ್ಳಿ ಸರಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿನಿಯರಿಂದ ಸಿಸಿ ಕ್ಯಾಮರಾ ದೇಣಿಗೆ

ಹರಪನಹಳ್ಳಿ : ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆಯ ವಿದ್ಯಾರ್ಥಿನಿಯರು ಬುಧವಾರ ಸಿಸಿ ಕ್ಯಾಮರಾವನ್ನು ದೇಣಿಗೆಯಾಗಿ ನೀಡಿದ್ದಾರೆ.
ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರಜಿಯಾ ಬಾನು ಅವರು ತಮ್ಮ ಒಂದು ತಿಂಗಳ ಗೌರವ ಧನವನ್ನು ಶಾಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ನೀಡಿದರು.
ಇದೇ ಶಾಲೆಯ ಹಳೆಯ ವಿದ್ಯಾರ್ಥಿನಿಯರಾದ ಹಾಗೂ ಪ್ರಸ್ತುತ ಅಂಗನವಾಡಿ ಶಿಕ್ಷಕಿಯರಾದ ಸಿ.ಎಲ್.ದೇವಕ್ಕ, ಟಿ.ಪಕ್ಕಿರಮ್ಮ, ಬಿ.ನೇತ್ರಮ್ಮ, ಹಾಗೂ ಅಂಗನವಾಡಿ ಸಹಾಯಕಿ ಟಿ.ಪುಷ್ಪಮೂರ್ತಿ ಅವರುಗಳೂ ತಮ್ಮ ಗೌರವ ಧನವನ್ನು ಶಾಲಾ ಸಿಸಿ ಕ್ಯಾಮರಾ ಅಳವಡಿಕೆಗೆ ದೇಣಿಗೆಯಾಗಿ ಅರ್ಪಿಸಿದರು.
ಹಳೆಯ ವಿದ್ಯಾರ್ಥಿನಿಯರ ಈ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ಕೆ ಗ್ರಾಮದಲ್ಲಿಯೂ ಸೇರಿದಂತೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಿ. ಹಾಲೇಶ್ ಅವರು, “ಶಾಲೆಯ ಹಳೆಯ ವಿದ್ಯಾರ್ಥಿನಿಯರು ಇದೇ ಗ್ರಾಮದಲ್ಲಿ ಗೌರವ ಧನದ ಆಧಾರದಲ್ಲಿ ಜೀವನ ನಡೆಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿಯೂ ಶಾಲೆಯ ಅಭಿವೃದ್ಧಿಗೆ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಜಿ. ಕೃಷ್ಣಮೂರ್ತಿ, ಹಿರಿಯ ಶಿಕ್ಷಕ ಸಿ. ನೀಲಪ್ಪ, ಶಿಕ್ಷಕರಾದ ಮೋಹನ್ ಕುಮಾರ್, ಕುಮಾರ ನಾಯ್ಕ, ಸಿದ್ದಪ್ಪ ನಾಯ್ಕ, ರುದ್ರಮುನಿ, ಹೇಮಾವತಿ, ನೇತ್ರಮ್ಮ, ಎಸ್‌ಡಿಎಂಸಿ ಸದಸ್ಯರಾದ ಕೆ. ಗುಡ್ಡಪ್ಪ, ಸಿ. ಮಂಜುನಾಥ್, ಕೆ. ಸಿದ್ದಲಿಂಗಪ್ಪ, ಟಿ.ಇ. ಪಕ್ಕಿರಾಜ್, ಹಾಗೂ ಮಂಜು ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.







