Harapanahalli | ವಾರ್ತಾಭಾರತಿ ವರದಿ ಫಲಶ್ರುತಿ : ಮಾದಾಪುರ ಸರ್ಕಾರಿ ಶಾಲೆಯ ಕಾಮಗಾರಿಗೆ ಮರುಚಾಲನೆ

ಹರಪನಹಳ್ಳಿ: ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಸೆ.27ರಂದು ‘ಮಾದಾಪುರ ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯ ಕೊರತೆ: ವಿದ್ಯಾರ್ಥಿಗಳಿಗೆ ಸಂಕಷ್ಟ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಮಾದಾಪುರ ಸರ್ಕಾರಿ ಶಾಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಇದೀಗ ಮರುಚಾಲನೆ ದೊರೆತಿದೆ.
ಶಾಲೆಯಲ್ಲಿ ಬಾಲಕಿಯರ ಶೌಚಾಲಯ ಹಾಗೂ ಅಡುಗೆ ಕೋಣೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಕುರಿತು ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಸ್ಥಿತಿಗತಿ ಪರಿಶೀಲಿಸಿದ್ದು, ಇದೀಗ ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ಪುನರಾರಂಭಿಸಿ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮರುಚಾಲನೆ ದೊರೆತಿರುವುದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಆಡಳಿತದ ಸ್ಪಂದನೆಗೆ ಕಾರಣವಾಗುವಲ್ಲಿ ಮಾಧ್ಯಮ ವರದಿ ಪ್ರಮುಖ ಪಾತ್ರ ವಹಿಸಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಇನ್ನೂ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.






