Harapanahalli | ಜೂ.17ರಂದು ಶಾಮನೂರು ಶಿವಶಂಕರಪ್ಪ ಜನ್ಮದಿನ ಅಂಗವಾಗಿ ಸಾಮೂಹಿಕ ವಿವಾಹ

ಹರಪನಹಳ್ಳಿ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನಾಚರಣೆಯ ಅಂಗವಾಗಿ ಜೂನ್ 17ರಂದು ದಾವಣಗೆರೆ ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧುಗಳಿಗೆ ಬಟ್ಟೆ ಹಾಗೂ ಕಾಲುಂಗುರ ನೀಡಲಾಗುತ್ತದೆ. ವಧು–ವರರಿಗೆ ಒಂದು ದಿನದ ಉಚಿತ ವಸತಿ ಹಾಗೂ ವಾಹನ ವ್ಯವಸ್ಥೆಯೂ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
“ಎಲ್ಲ ಧರ್ಮದ ವಧು–ವರರಿಗೆ ಆಯಾ ಧರ್ಮದ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಮದುವೆ ವಯಸ್ಸಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿಧುರ–ವಿಧವೆ ವಿವಾಹಕ್ಕೂ ಅವಕಾಶವಿದೆ,” ಎಂದು ವಿವರಿಸಿದರು.
ವಿವಾಹ ಮಹೋತ್ಸವಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಹೊರ ತಾಲ್ಲೂಕುಗಳಿಂದ ಬರುವವರಿಗೆ ವಿಶೇಷ ವಸತಿ ಹಾಗೂ ಸಾರಿಗೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಆಸಕ್ತರು ಜೂನ್ 12ರೊಳಗೆ ಸ್ಥಳೀಯ ಜನಸಂಪರ್ಕ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9448338704 ಹಾಗೂ 9886344583 ಸಂಖ್ಯೆಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪರಶುರಾಮ್, ಮಾಜಿ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಕುಬೇರ್ ಗೌಡ್ರು, ಕಂಭತ್ತಹಳ್ಳಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.






