ಹರಪನಹಳ್ಳಿ | ತೌಡೂರು ಗ್ರಾಮ ಪಂಚಾಯತ್‌ನಲ್ಲಿ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಹರಪನಹಳ್ಳಿ: ತಾಲೂಕಿನ ನರೇಗಾ ಯೋಜನೆಯಡಿ ನಿಗದಿತ ಕಾಮಗಾರಿಗಳ ಶೇ. 90ರಷ್ಟು ಅವಧಿ ಮುಕ್ತಾಯ ಹಂತದಲ್ಲಿದ್ದು, ಕಾರ್ಮಿಕರಿಂದ ಹೆಚ್ಚಿನ ಮಾನವ ದಿನಗಳ ಸೃಜನೆಗೆ ತೀವ್ರ ಬೇಡಿಕೆ ಬಂದಿದೆ ಎಂದು ತಾಲೂಕು ಸಂಪನ್ಮೂಲ ವ್ಯಕ್ತಿ ಎಚ್.ಕೊಟ್ರೇಶ್ ತಿಳಿಸಿದರು.
ತಾಲೂಕಿನ ತೌಡೂರು ಗ್ರಾಮ ಪಂಚಾಯತ್ ಆವರಣದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಹಾಗೂ ರಾಜ್ಯ ಹಣಕಾಸು ಆಯೋಗದ ಕಾಮಗಾರಿಗಳ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರವು ನರೇಗಾ ಮತ್ತು ಹಣಕಾಸು ಆಯೋಗದ ಮೂಲಕ ಬಿಡುಗಡೆ ಮಾಡುವ ಅನುದಾನವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಮಗಾರಿಗಳಿಗೆ ಈ ಯೋಜನೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ತೌಡೂರು ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಈಗಾಗಲೇ 978 ಕಾರ್ಮಿಕರಿಂದ ಹೆಚ್ಚುವರಿ ಕೆಲಸ ನಿರ್ವಹಿಸಲು ಮನವಿ ಬಂದಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕೆಲವು ಕಾಮಗಾರಿಗಳ ಕುರಿತು ವ್ಯಕ್ತವಾಗಿರುವ ಆಕ್ಷೇಪಣೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶಿವಕುಮಾರ ನಾಯ್ಕ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಉತ್ತಮವಾಗಿ ನಡೆದಿವೆ. 100 ದಿನಗಳ ಕೆಲಸ ಪೂರೈಸಿರುವ ಕಾರ್ಮಿಕರಿಗೆ ಹೆಚ್ಚುವರಿ ಕೆಲಸ ನೀಡುವ ಕುರಿತು ಕಾರ್ಮಿಕರಿಂದ ಬಂದಿರುವ ಮನವಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆಕ್ಷೇಪಣೆಯಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷೆ ಯಶೋಧಮ್ಮ, ಪ್ರಮುಖರಾದ ಶೆಟ್ಟಿ ನಾಯ್ಕ, ಜನಾರ್ದನ, ಪಾರ್ವತಮ್ಮ, ಷಣ್ಮುಖಪ್ಪ, ಮಂಜಾನಾಯ್ಕ, ಹನುಮಂತಪ್ಪ, ನಂದ್ಯಪ್ಪ, ಮಾರುತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







