Harapanahalli | ಕೆರೆಗುಡಿಹಳ್ಳಿಯಲ್ಲಿ ಉಪಟಳ ನೀಡುತ್ತಿದ್ದ ಮಂಗ ಸೆರೆ

ಹರಪನಹಳ್ಳಿ : ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ನಿರಂತರವಾಗಿ ಉಪಟಳ ನೀಡುತ್ತಿದ್ದ ಮಂಗವನ್ನು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಸೆರೆಹಿಡಿಯಲಾಯಿತು.
ಕೆಲ ದಿನಗಳಿಂದ ವಾನರಗಳ ಗುಂಪು ಗ್ರಾಮದಲ್ಲಿ ಓಡಾಡುತ್ತಿದ್ದು, ಮನೆಗಳ ಬಳಿ ಬಂದು ಜನರಿಗೆ ತೊಂದರೆ ನೀಡುತ್ತಿದ್ದ ಕಾರಣ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ವಿಶೇಷವಾಗಿ ಒಂದು ಮಂಗ ಸಾರ್ವಜನಿಕರಿಗೆ ಹೆಚ್ಚು ಉಪಟಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಅಭಿಜಿತ್ ಗಂಗಾವತಿ ಅವರ ನೇತೃತ್ವದಲ್ಲಿ ಹೊಸಕೋಟೆ ಗ್ರಾಮ ಪಂಚಾಯಿತಿ, ಹರಪನಹಳ್ಳಿ ಅರಣ್ಯ ಇಲಾಖೆ ಹಾಗೂ ಅರಸೀಕೆರೆ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿದರು. ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಉಪಟಳ ನೀಡುತ್ತಿದ್ದ ವಾನರವನ್ನು ಸುರಕ್ಷಿತವಾಗಿ ಸೆರೆಹಿಡಿದು ಗ್ರಾಮಸ್ಥರ ಆತಂಕ ನಿವಾರಿಸಲಾಯಿತು.
ಕಾರ್ಯಾಚರಣೆಯಲ್ಲಿ ವಕೀಲ ಯು.ಎಂ. ಬಸವರಾಜಯ್ಯ, ಗುಡಿಹಳ್ಳಿ ಹಾಲೇಶ್, ಜಿ. ವಿರೂಪಾಕ್ಷಪ್ಪ, ಯು.ಎಂ. ಬಸಯ್ಯ, ಜಿ. ಅಂಬರೀಷ್, ಎಸ್. ಮಹೇಶ್, ಹಳೇಮನಿ ಚಂದು, ಗುಂಡಪ್ಪರ ಮಂಜುನಾಥ್, ಸಿ. ವಿರೇಶ್, ಬಸವರಾಜ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರೇವಣಸಿದ್ಧಚಾರಿ, ಕರಿಯಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಗ್ರಾಮಸ್ಥರಿಂದ ದೂರು ಬಂದ ತಕ್ಷಣ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮಂಗವನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿಯೂ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. -ಹೇಮಂತ್ ಕುಮಾರ್, ಪಿಡಿಒ, ಹೊಸಕೋಟೆ ಗ್ರಾಮ ಪಂಚಾಯಿತಿ






