Harapanahalli | ಶೋಷಣೆ ವಿರುದ್ಧ ಜನರು ಧ್ವನಿ ಎತ್ತಬೇಕು: ಎಚ್.ಎಂ.ಸಂತೋಷ್

ಹರಪನಹಳ್ಳಿ: ರೈತರು, ಕಾರ್ಮಿಕರು ಹಾಗೂ ದೀನ ದಲಿತರ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ಜನರು ಧ್ವನಿ ಎತ್ತುವ ಮೂಲಕ ಬದಲಾವಣೆ ತರಬೇಕು ಎಂದು ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಹೇಳಿದರು.
ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸಿಪಿಐ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಗಸ್ಟ್ 6ರಿಂದ ದೇಶಾದ್ಯಂತ ‘ಬದಲಾವಣೆ’ ಘೋಷಣೆಯಡಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಶೋಷಣೆಯ ವಿರುದ್ಧ ಹೋರಾಟ ನಡೆಸಲು ಕಮ್ಯುನಿಸ್ಟ್ ಪಕ್ಷ ಸಿದ್ಧವಾಗಿದೆ ಎಂದರು.
ಉದ್ಯೋಗ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳು ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿವೆ. ಶಿಕ್ಷಣ, ವಸತಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹರಪನಹಳ್ಳಿ ಅತ್ಯಂತ ಬರಪೀಡಿತ ಪ್ರದೇಶವಾಗಿರುವುದರಿಂದ ಸಮಗ್ರ ಮಾಹಿತಿ ಆಧರಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಉದ್ಯೋಗ ಖಾತರಿ ಯೋಜನೆಯ ಮೂಲ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಗ್ರಾಮಗಳಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರೂ ಹಲವು ಗ್ರಾಮಗಳಲ್ಲಿ ಇನ್ನೂ ರುದ್ರಭೂಮಿ ವ್ಯವಸ್ಥೆ ಇಲ್ಲ. ಅಂತಹ ಗ್ರಾಮಗಳಲ್ಲಿ ತಕ್ಷಣ ರುದ್ರಭೂಮಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಸಮುದಾಯ ಭವನ, ವಸತಿ, ಆರೋಗ್ಯ, ಪಡಿತರ ವಿತರಣೆ, ರೈತರಿಗೆ ಬೆಳೆ ವಿಮೆ ಹಾಗೂ ರುದ್ರಭೂಮಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಆದರೆ ಸರ್ಕಾರ ಈ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸ್ಥಳೀಯ ಸಮಸ್ಯೆಗಳ ಕುರಿತು ಸಲ್ಲಿಸಲಾದ ಮನವಿ ಪತ್ರವನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ್ ಮಾತನಾಡಿ, ಮನವಿಯಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು ಎಂದರು.
ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 487 ವಸತಿಹೀನರಿಂದ ಬಂದಿರುವ ಮನವಿಗಳನ್ನು ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ. ಇ-ಸ್ವತ್ತು ತಂತ್ರಾಂಶದಲ್ಲಿನ ದೋಷಗಳನ್ನು ಸರಿಪಡಿಸುವ ಕಾರ್ಯ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದ್ದು, 20 ದಿನಗಳೊಳಗೆ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ತಾಲೂಕಿನ 37 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗಿದ್ದು, 128 ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿ.ಬಿ. ರಾಮ್ ಜಿ ಯೋಜನೆಯಡಿ ಸುಮಾರು 9,000 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮೊದಲು ಕೆರೆಗುಡಿಹಳ್ಳಿ ಗ್ರಾಮದಿಂದ ಆರಂಭವಾದ ‘ಹೊಸಕೋಟೆ ಗ್ರಾಮ ಪಂಚಾಯಿತಿ ಚಲೋ’ ಜಾಥಾ ಚಿಕ್ಕಕಬ್ಬಳ್ಳಿ ಮೂಲಕ ಹೊಸಕೋಟೆ ಗ್ರಾಮ ಪಂಚಾಯಿತಿಗೆ ತಲುಪಿತು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಶಿವರಾಮ್, ಎ. ದುರುಗಪ್ಪ, ಡಿ. ದಾನಪ್ಪ, ಕರಿಬಸಮ್ಮ, ನೀಲವಂಜಿ ಸುರೇಶ್, ಬಕ್ಕಲಾಡಿ ನಾಗಪ್ಪ, ಪಿ.ಎಸ್. ವಿರೇಶ್, ದುಗ್ಗತ್ತಿ ಸಿದ್ದೇಶ್, ವಿರೂಪಾಕ್ಷಪ್ಪ, ಬಳಿ ಬಸವರಾಜ್, ಅಂಗಡಿ ಚಂದ್ರಪ್ಪ, ಪೂಜಾರಿ ತಿಮ್ಮಪ್ಪ, ಹಿಟ್ಟಿನ ಗಿರಣಿ ಬಸವರಾಜ್, ಡಿ. ಅರುಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಂತ್ ಕುಮಾರ್, ಕಾರ್ಯದರ್ಶಿ ಚನ್ನಬಸಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.






