Harapanahalli | ಪಿಂಚಣಿ ಹಣ ವಿಳಂಬ ಖಂಡಿಸಿ ನಾಡಕಚೇರಿ ಎದುರು ಪ್ರತಿಭಟನೆ

ಹರಪನಹಳ್ಳಿ : ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಹಣ ವಿಳಂಬವಾಗಿರುವುದನ್ನು ಖಂಡಿಸಿ ಫಲಾನುಭವಿಗಳು ಬುಧವಾರ ಅರಸೀಕೆರೆ ನಾಡಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಕಿಸಾನ್ ಸಭಾ, ರೈತ ಸಂಘ ಹಾಗೂ ದಲಿತ ಸಂಘಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್, ಹಲವು ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಆರು ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.
ಪರಿಶೀಲನೆ ಹೆಸರಿನಲ್ಲಿ ನೈಜ ಫಲಾನುಭವಿಗಳ ಪಿಂಚಣಿಯನ್ನೂ ಸ್ಥಗಿತಗೊಳಿಸಲಾಗಿದೆ. ಪಿಂಚಣಿಯನ್ನೇ ನಂಬಿ ಬದುಕುತ್ತಿರುವ ಬಡವರು, ರೈತರು, ಕೂಲಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ದೂರಿದರು.
ಅರಸೀಕೆರೆ ಹೋಬಳಿಗೆ ಮಲತಾಯಿ ಧೋರಣೆ ತೋರಲಾಗುತ್ತಿದ್ದು, ಸಮಸ್ಯೆ ತಕ್ಷಣ ಬಗೆಹರಿಸದಿದ್ದರೆ ನಾಡಕಚೇರಿಗೆ ಬೀಗ ಹಾಕಿ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಜೆ. ಚಂದ್ರಮೋಹನ್, ಫಲಾನುಭವಿಗಳ ಸರ್ವೆ ಕಾರ್ಯ ಹಾಗೂ ಸರ್ವರ್ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಚ್. ಹಾಲಪ್ಪ, ಎ.ಬಿ. ನಾಗರಾಜ್ ಗೌಡ, ಎನ್. ಮಲ್ಲೇಶಪ್ಪ, ಎಸ್. ಬಸವರಾಜಪ್ಪ, ಗುಂಡಗತ್ತಿ ರಾಮಚಂದ್ರಪ್ಪ, ಯು.ಎಂ. ಬಸಯ್ಯ, ರಾಮಘಟ್ಟ ಎಸ್. ಚಿಕ್ಕಪ್ಪ, ಹಮಾಲರ ಸಂಘದ ನಾಗರಾಜ್, ಗೌರಮ್ಮ, ರತ್ನಮ್ಮ, ಪಂಚಪ್ಪ ಸೇರಿದಂತೆ ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






