Harapanahalli | ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ : ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ

ಹರಪನಹಳ್ಳಿ : “ರಾಜಕೀಯ ಶಕ್ತಿ ಹಾಗೂ ಎಸ್ಸಿ-ಎಸ್ಟಿ ಸ್ಥಾನಮಾನ ಸಿಗದಿರುವುದರಿಂದ ಉಪ್ಪಾರ ಸಮಾಜದ ಅಭಿವೃದ್ಧಿ ಮರೀಚಿಕೆಯಾಗಿದೆ” ಎಂದು ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯ ಸಿಂಹಾಸನ ಭಗೀರಥ ಪೀಠಾಧ್ಯಕ್ಷ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಳಗಿನ ಉಪ್ಪಾರಗೇರಿ ಗರಡಿ ಮನೆ ಸಮೀಪ ನಡೆದ ಶ್ರೀ ಭಗೀರಥ ಮಹರ್ಷಿಗಳ ಭವ್ಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಉಪ್ಪಾರ ಸಮಾಜವನ್ನು ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿಸಿ ಸಮಾಜದ ಏಳಿಗೆಗೆ ಸರ್ಕಾರ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜಕ್ಕೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 10 ಶಾಸಕರಿಗೆ ಟಿಕೆಟ್ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮುಂದಿನ ಬಾರಿ ಹರಪನಹಳ್ಳಿ ಕ್ಷೇತ್ರದಿಂದ ಡಾ. ಉಮೇಶ್ ಬಾಬು ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದೂ ಅವರು ಆಗ್ರಹಿಸಿದರು.
ಭಗೀರಥ ಮಹರ್ಷಿಗಳು ಕೇವಲ ಉಪ್ಪಾರ ಸಮಾಜಕ್ಕೆ ಸೀಮಿತರಾದವರಲ್ಲ. ಗಂಗೆಯನ್ನು ಧರೆಗೆ ತಂದು ಸಮಸ್ತ ಜೀವಿಗಳಿಗೆ ಜೀವನಾಧಾರ ಒದಗಿಸಿದ ಮಹಾನ್ ವ್ಯಕ್ತಿತ್ವ ಎಂದು ಬಣ್ಣಿಸಿದರು.
“ಭಗೀರಥ ಪ್ರಯತ್ನ ಇಂದಿನ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆ. ಹಬ್ಬಗಳು ಸಂಬಂಧ ಬೆಸೆಯುವ ಕೊಂಡಿಗಳಾಗಬೇಕು. ದುಂದುವೆಚ್ಚ ಹಾಗೂ ಕುಡಿತದಂತಹ ದುಶ್ಚಟಗಳಿಂದ ದೂರವಿದ್ದು ಶಿಕ್ಷಣಕ್ಕೆ ಆದ್ಯತೆ ನೀಡಬೇಕು” ಎಂದು ಕಿವಿಮಾತು ಹೇಳಿದರು.
ಹರಪನಹಳ್ಳಿಯಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷರ ಆಯ್ಕೆಯಲ್ಲಿ ಉಂಟಾಗಿರುವ ಗೊಂದಲವನ್ನು ಶೀಘ್ರದಲ್ಲೇ ಸಭೆ ಕರೆದು ಬಗೆಹರಿಸಲಾಗುವುದು ಎಂದರು.
2025-26ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಉಮೇಶ್ ಬಾಬು, ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಮಂಜಮ್ಮ, ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಅಂಜನಪ್ಪ, ಶಿಕ್ಷಕಿ ಲಕ್ಷ್ಮೀದೇವಿ ಹಾಗೂ ರೈತ ಮುಖಂಡ ಪರಶುರಾಮ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






