ಹೊಸಕೋಟೆ | ಸೊಸೈಟಿಯಲ್ಲಿ ರೈತರ ಹಣ ದುರ್ಬಳಕೆ ಆರೋಪ: ಸಿಐಡಿ ತನಿಖೆ ಆರಂಭ

ಹರಪನಹಳ್ಳಿ: ತಾಲೂಕಿನ ಹೊಸಕೋಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ಪೊಲೀಸ್ ಅಧಿಕಾರಿಗಳ ತಂಡವು ಮಂಗಳವಾರ ತನಿಖೆ ಆರಂಭಿಸಿದೆ.
ಸಹಕಾರ ಸಂಘದ ಹಿಂದಿನ ಕಾರ್ಯದರ್ಶಿ ಭೀಮಪ್ಪ ಎಂಬುವವರು ರೈತರ ಠೇವಣಿ, ಸಾರ್ವಜನಿಕರ ಪಿಗ್ಮಿ ಹಣ ಹಾಗೂ ಸಾಲದ ಮೊತ್ತ ಸೇರಿದಂತೆ ಒಟ್ಟು 4 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಗರಣದ ವಿರುದ್ಧ ತಾಲೂಕಿನ ವಿವಿಧ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದವು. ಪ್ರತಿಭಟನೆಗಳ ತೀವ್ರತೆಗೆ ಎಚ್ಚೆತ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಹಣ ದುರುಪಯೋಗವಾಗಿರುವುದು ದೃಢಪಟ್ಟಿತ್ತು.
ಬಳಿಕ ಸಂಘದ ಈಗಿನ ಅಧ್ಯಕ್ಷ ಸುರೇಶ್ ಹಾಗೂ ಆಡಳಿತ ಮಂಡಳಿಯವರು ನೀಡಿದ ದೂರಿನನ್ವಯ ಅರಸೀಕೆರೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ಮೇಲ್ನೋಟಕ್ಕೆ ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ, ಪ್ರಕರಣದ ಹೆಚ್ಚಿನ ತನಿಖೆಗಾಗಿ ಇದನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.
ಅದರಂತೆ ಸಿಐಡಿ ಅಧಿಕಾರಿ ಇತೇಂದ್ರ ಹಾಗೂ ಅವರ ತಂಡವು ಸೋಮವಾರದಿಂದಲೇ ಸಂಘದಲ್ಲಿ ಮೊಕ್ಕಾಂ ಹೂಡಿದ್ದು, ಪ್ರತಿಯೊಬ್ಬ ನೌಕರರ ವಿಚಾರಣೆ ನಡೆಸುತ್ತಿದೆ. ಎಲ್ಲ ಸಿಬ್ಬಂದಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ದಾಖಲೆಗಳ ಕೂಲಂಕಷ ಪರಿಶೀಲನೆಯೊಂದಿಗೆ ತನಿಖೆ ಮುಂದುವರಿದಿದೆ.







