SIR ವಿರುದ್ಧ ಹೊಸಪೇಟೆಯಲ್ಲಿ ಬೃಹತ್ ಪ್ರತಿಭಟನೆ: ಜನವಿರೋಧಿ ಕ್ರಮ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಹೊಸಪೇಟೆ/ವಿಜಯನಗರ: ಕರ್ನಾಟಕ ರಾಜ್ಯದ ಪ್ರಗತಿಪರ ಸಂಘಟನೆಗಳು ಮತ್ತು ಜಾತ್ಯಾತೀತ ಪಕ್ಷಗಳ ಒಕ್ಕೂಟದ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕ್ರಮವನ್ನು ವಿರೋಧಿಸಿ ಶನಿವಾರ ಹೊಸಪೇಟೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ನಂತರ ತಾಲೂಕು ದಂಡಾಧಿಕಾರಿಗಳ ಮೂಲಕ ಕೇಂದ್ರ ಚುನಾವಣಾ ಆಯೋಗ ಹಾಗೂ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ SIR ಪ್ರಕ್ರಿಯೆಯು ಜನವಿರೋಧಿ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧದ ಕ್ರಮವಾಗಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿ ಅದನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಾಹಿತಿ, ಚಿಂತಕ ಹಾಗೂ ಹೋರಾಟಗಾರ ಪೀರ್ ಭಾಷಾ, ದಲಿತ ಹೋರಾಟಗಾರ ಕರಿಯಪ್ಪ ಗುಡಿಮನಿ, ಮುನ್ನಿ ಕಾಸಿಂ, ವಕೀಲ ಹೆಚ್. ಮಹೇಶ್ ಹಾಗೂ ಬಣ್ಣದಮನೆ ಸೋಮಶೇಖರ್ ಮಾತನಾಡಿದರು. ಮತದಾನದ ಹಕ್ಕು ಸಂವಿಧಾನಾತ್ಮಕ ಹಕ್ಕಾಗಿದ್ದು, ಯಾವುದೇ ವರ್ಗದ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಂತರ ವಿಶಾಲ್ ಮ್ಯಾಸಾರ ಅವರು ಮನವಿ ಪತ್ರವನ್ನು ಓದಿ ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಕೆ. ರಮೇಶ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಖಾಜಾ ಹುಸೇನ್, ನಗರಸಭೆ ಸದಸ್ಯರಾದ ಹೆಚ್.ಕೆ. ಮಂಜುನಾಥ್, ಶ್ರೀಮತಿ ಮುನ್ನಿ ಕಾಸಿಂ, ಕನಕಮ್ಮ, ಮೊಹಮ್ಮದ್ ಗೌಸ್, ವಿ. ಹುಲುಗಪ್ಪ, ದಾದಾ ಖಲಂದರ್, ರೋಹಿಣಿ ವೆಂಕಟೇಶ್, ಪರಗಂಟಿ ಶೇಖರ್, ಸೇವಾದಳ ಜಿಲ್ಲಾ ಸಂಘಟಕ ಬಿ. ಮಾರೆಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಹೆಚ್. ಸೋಮಶೇಖರ್, ಕೊಟಗಿನಾಳ್ ಮಲ್ಲಿಕಾರ್ಜುನ, ಸಿ.ಆರ್. ಭರತ್ ಕುಮಾರ್, ಎನ್. ವೆಂಕಟೇಶ್, ಇಂದುಮತಿ, ಪಿ. ವೀರಾಂಜನೇಯ್ಯ, ಸಣ್ಣ ಈರಣ್ಣ, ವಿಜಯಕುಮಾರ್, ಲಿಂಗಣ್ಣ ನಾಯಕ, ವೆಂಕಟೇಶ್ವರಲು, ಸಣ್ಣ ಮಾರೆಪ್ಪ, ಎಸ್.ಬಿ. ಮಂಜುನಾಥ್, ಶೇಖ್ ತಾಜುದ್ದೀನ್, ಕೆ. ಇಮ್ತಿಯಾಜ್, ಜೆ. ಶಿವಕುಮಾರ್, ರಾಮಾಂಜಿನಿ, ಕೆ.ಎಸ್. ದಾದಾಪೀರ್, ರಾಮಚಂದ್ರ ಬಾಬು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆಯು ಶಾಂತಿಯುತವಾಗಿ ನಡೆದಿದ್ದು, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕುಗಳನ್ನು ರಕ್ಷಿಸಲು ಜನತೆ ಸಂಘಟಿತರಾಗಬೇಕೆಂದು ಮುಖಂಡರು ಕರೆ ನೀಡಿದರು.






