Hosapete | ವೈಜ್ಞಾನಿಕವಾಗಿ ಕಸ ವಿಂಗಡಿಸಿ ನೀಡುವುದು ಕಡ್ಡಾಯ: ನಿಯಮ ಉಲ್ಲಂಘಿಸಿದಲ್ಲಿ ಭಾರಿ ದಂಡ

ನಗರಸಭೆ ಪೌರಾಯುಕ್ತ ಶಿವಕುಮಾರ್
ವಿಜಯನಗರ (ಹೊಸಪೇಟೆ): ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗಾಗಿ ಹೊಸಪೇಟೆ ನಗರಸಭೆಯು ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಿದೆ. ಸಾರ್ವಜನಿಕರು ಹಾಗೂ ಉದ್ದಿಮೆದಾರರು ಇನ್ನು ಮುಂದೆ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ನೀಡಬೇಕಾಗಿದ್ದು, ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಶಿವಕುಮಾರ್ ಎಚ್ಚರಿಸಿದ್ದಾರೆ.
ಪ್ರತಿಯೊಬ್ಬ ನಾಗರಿಕರು, ವ್ಯಾಪಾರಸ್ಥರು, ಕಲ್ಯಾಣ ಮಂಟಪ, ಬಾರ್ ಮತ್ತು ರೆಸ್ಟೋರೆಂಟ್ಗಳ ಮಾಲಕರು ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ಸ್ಪೆಷಲ್ ಕೇರ್ ವೇಸ್ಟ್ ಎಂಬುದಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಬೇಕು. ವಿಂಗಡಿಸಿದ ತ್ಯಾಜ್ಯವನ್ನು ನಗರಸಭೆಯ ಆಟೋ ಟಿಪ್ಪರ್ಗಳಿಗೆ ಅಥವಾ ಕಸದ ವಾಹನಗಳಿಗೆ ನೀಡಬೇಕು.
ಘನತ್ಯಾಜ್ಯ ವಸ್ತುಗಳ ವ್ಯವಸ್ಥಾಪನೆ ಮತ್ತು ನಿರ್ವಹಣೆ ನಿಯಮಗಳು-2026ರ ಪ್ರಕಾರ, ಮೂಲದಲ್ಲಿಯೇ ಕಸ ವಿಂಗಡಿಸದೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ದಂಡ ವಿಧಿಸಲಾಗುವುದು. ಜಿಲ್ಲೆಯನ್ನು ಸುಂದರ ಮತ್ತು ಸ್ವಚ್ಛ ನಗರವಾಗಿಸಲು ಸಾರ್ವಜನಿಕರು ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರು ನಗರಸಭೆಯೊಂದಿಗೆ ಕೈಜೋಡಿಸಿ, ಕಸ ವಿಂಗಡಣೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೌರಾಯುಕ್ತ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




