ಹೊಸಪೇಟೆ | ಪತ್ನಿಯನ್ನು ಹತ್ಯೆ ಮಾಡಿ ಸೇತುವೆ ಬಳಿ ಹೂತು ಹಾಕಿದ ಪತಿ : ಎರಡು ತಿಂಗಳ ಬಳಿಕ ಪ್ರಕರಣ ಬಯಲು

ಹೊಸಪೇಟೆ : 17ರ ಹರೆಯದ ಅಪ್ರಾಪ್ರೆಯನ್ನು ಪ್ರೀತಿಸಿ ವಿವಾಹವಾದಾತ ಕೆಲವೇ ದಿನಗಳಲ್ಲಿ ಆಕೆಯನ್ನು ಹತ್ಯೆ ಮಾಡಿ ಹೂತು ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ನಗರದ ನೇಕಾರ ಕಾಲೋನಿ ನಿವಾಸಿ ಮಂಜುನಾಥ (24) ಕೃತ್ಯವನ್ನು ಎಸಗಿದ ಆರೋಪಿ. ಈತ ಚಪ್ಪರದಹಳ್ಳಿ ನಿವಾಸಿ ಅಪ್ರಾಪ್ತ ಬಾಲಕಿಯನ್ನು ನಾಲ್ಕು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿ ತನ್ನ ಮನೆಗೆ ಕರೆದೊಯ್ದಿದ್ದ. ಇದಾದ ಕೆಲವೇ ದಿನಗಳಲ್ಲಿ ಮಂಜುನಾಥ ಪತ್ನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಕೊಲೆ ಮಾಡಿದ್ದಾನೆ. ಬಳಿಕ ಸ್ನೇಹಿತರಾದ ತರುಣ್, ಅಕ್ಬರ್ ಜೊತೆ ಸೇರಿ ಮೃತದೇಹವನ್ನು ಕೊಪ್ಪಳ ವ್ಯಾಪ್ತಿಗೆ ಬರುವ ಮುನಿರಾಬಾದ್ ಸೇತುವೆ ಬಳಿ ಹೂತು ಹಾಕಿದ್ದಾನೆ.
ಈ ಘಟನೆ ಎರಡು ತಿಂಗಳ ಹಿಂದೆ ನಡೆದಿದೆ. ಆದರೆ, ಓರ್ವ ಆರೋಪಿ ಪ್ರಾಪಪ್ರಜ್ಞೆಯಿಂದ ಬಾಲಕಿಯ ತಂದೆಗೆ ಎರಡು ದಿನಗಳ ಹಿಂದೆ ಕೊಲೆಯ ವಿಷಯ ತಿಳಿಸಿದ್ದ. ಬಳಿಕ ಬಾಲಕಿಯ ತಂದೆ ಹೊಸಪೇಟೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಮಂಜುನಾಥ ಕಳ್ಳತನ ಪ್ರಕರಣವೊಂದರಲ್ಲಿ 15 ದಿನಗಳ ಹಿಂದೆ ಜೈಲು ಸೇರಿದ್ದ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







