ಹೊಸಪೇಟೆ | ದೇವದಾಸಿ ಪದ್ಧತಿಯ ನಿರ್ಮೂಲನೆಗೆ ನಾವೆಲ್ಲ ಕೈಜೋಡಿಸೋಣ : ಡಾ.ಡಿ.ವಿ.ಪರಮಶಿವಮೂರ್ತಿ

ಹೊಸಪೇಟೆ :ಕನ್ನಡ ವಿಶ್ವವಿದ್ಯಾಲಯದಲ್ಲಿ ದೇವದಾಸಿ ಮಹಿಳೆಯರಿಗೆ ಸನ್ಮಾನಿಸುವ ಮೂಲಕ ಅರ್ಥಪೂರ್ಣ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಈ ವೇಳೆ ದೇವದಾಸಿ ಮಹಿಳೆಯರಾದ ಕಮಲಾಪುರದ ಕರಿಯಮ್ಮ, ದಳವಾಯಿ ತಾಯಮ್ಮ, ಗೋಪಮ್ಮ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ ಬಂದು 80 ವರ್ಷ ಪೂರೈಸುವ ಹೊಸ್ತಿಲಲ್ಲಿದ್ದರೂ ಕೂಡ ಇಂದಿನ ಸಮಾಜದಲ್ಲಿ ಅನೇಕರು ಸ್ವಾತಂತ್ರವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲಿ ಈ ಉತ್ತರ ಕರ್ನಾಟಕ ಭಾಗದ ದೇವದಾಸಿ ಮಹಿಳೆಯರು ಸ್ವಾತಂತ್ರ ಬಂದರೂ ಕೂಡ ಅನೇಕರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ದೇವದಾಸಿಯರನ್ನು ನಿರ್ಮಿಸಿದ್ದು ಪುರುಷ ಸಮಾಜ, ಸ್ವಾರ್ಥ ಸಮಾಜ, ಹಣವುಳ್ಳವರು, ಜಮೀನುವುಳ್ಳವರು ತಮ್ಮ ದೈಹಿಕ ಲಾಲಸೆಗಾಗಿ ಯಾವುದೋ ಒಂದು ಸಂಪ್ರದಾಯದ ನೆಪದಲ್ಲಿ, ದೇವರ ಹೆಸರಲ್ಲಿ ಇಡೀ ಮಹಿಳೆಯ ಬದುಕು ಬಲಿಯಾಗಿರುವುದನ್ನು ಇತಿಹಾಸದೂದ್ದಕ್ಕೂ ನೋಡಬಹುದು ಎಂದರು.
ದೇವದಾಸಿ ಮಹಿಳೆಯರು ಸಮಾಜಕ್ಕೆ ಉಪಕಾರಿಯಾದ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಚರಿತ್ರೆಯನ್ನು ಗಮನಿಸಿದಾಗ ಸೂಳೆ ಸಂಕವ್ವ ವಚನಗಳನ್ನು ರಚಿಸಿದರು. 11ನೇ ಶತಮಾನದಲ್ಲಿ ಗೌರವಲೇ ಎಂಬುವವಳು ಊರಿನ ಜನರ ಉಪಕಾರಕ್ಕಾಗಿ ಲಕ್ಷ್ಮೇಶ್ವರದಲ್ಲಿ ಬಾವಿಯನ್ನು ನಿರ್ಮಿಸಿದಳು. ಚೆನ್ನಗಿರಿಯಲ್ಲಿ ದೊಡ್ಡ ಆಣೆಕಟ್ಟು ಸ್ವರೂಪದ ಕೆರೆಯನ್ನು ಒಬ್ಬ ವೇಶ್ಯೆ ಕಟ್ಟಿಸಿದಳು. ಹೀಗೆ ವಿವಿಧ ರೀತಿಯಲ್ಲಿ ದೇವದಾಸಿಯರು ಸಮಾಜದ ಒಳತಿಗೆ ಶ್ರಮಿಸಿರುವುದು ಕಂಡು ಬರುತ್ತದೆ. ಆದರೂ ವಾರವಧು, ವಾರಂಗನೆ ಎಂದು ಕರೆಯುವ ಮೂಲಕ ಇಂದಿಗೂ ದೇವದಾಸಿ ಮಹಿಳೆಯರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಇಂತಹ ಶೋಷಣೆಗೆ ಒಳಗಾದ ಹಿರಿಯ ದೇವದಾಸಿ ತಾಯಂದಿರನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ ದಿನಾಚರಣೆಯ ಈ ಸಂದರ್ಭದಲ್ಲಿ ಸನ್ಮಾನಿಸುವುದರ ಮೂಲಕ ನಮ್ಮ ಪಾಪಪ್ರಜ್ಞೆಯನ್ನು ಕಡಿಮೆ ಮಾಡಿಕೊಳ್ಳೋಣ, ನಮ್ಮನ್ನು ನಾವು ವಿಮರ್ಶೆ ಗೊಳಪಡಿಸಿಕೊಳ್ಳೋಣ. ದೇವದಾಸಿ ಪದ್ಧತಿಯನ್ನು ವಿರೋಧಿಸೋಣ, ಸಮಾಜದಲ್ಲಿ ಈ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ನಾವೆಲ್ಲ ಕೈಜೋಡಿಸೋಣ ಎಂದು ತಿಳಿಸಿದರು.
ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಡ, ಅಧ್ಯಯನಾಂಗದ ನಿರ್ದೇಶಕರು, ಉಪಕುಲಸಚಿವರು ಸೇರಿ ದೇವದಾಸಿ ಮಹಿಳೆಯರಾದ ಕಮಲಾಪುರದ ಕರಿಯಮ್ಮ, ದಳವಾಯಿ ತಾಯಮ್ಮ, ಗೋಪಮ್ಮ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.







