ಹೊಸಪೇಟೆ | ಸರಕಾರದ ಸಾಧನೆಯನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್

ಹೊಸಪೇಟೆ (ವಿಜಯನಗರ) : ಸರಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನದ ಮಳಿಗೆಯನ್ನು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡಿದರು.
ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರದ ಎರಡು ವರ್ಷದ ಸಾಧನೆಗಳ ಸಮಾವೇಶವನ್ನು ಹೊಸಪೇಟೆ ನಗರದಲ್ಲಿ ಆಯೋಜಿಸಿ ಯಶಸ್ವಿಗೊಳಿಸಿರುವುದು ತೃಪ್ತಿ ನೀಡಿದೆ. ರಾಜ್ಯ ಸರಕಾರವು ಜಾರಿ ಮಾಡಿದ ಅನ್ನಭಾಗ್ಯ ಯೋಜನೆಯಿಂದ ಕಡು ಬಡವರು, ಕೃಷಿ ಕೂಲಿಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಗೃಹ ಲಕ್ಷೀ ಯೋಜನೆ ಜಾರಿಯಿಂದಾಗಿ ಮಹಿಳೆಯರಿಗೆ ಪ್ರತಿ ಮಾಹೆ 2,000 ರೂ. ಸಿಗುತ್ತಿದೆ. ಗೃಹ ಜ್ಯೋತಿ ಯೋಜನೆಯಿಂದ ಅರ್ಹ ಫಲಾನುಭವಿಗಳಿಗೆೆ ಮತ್ತು ಯುವನಿಧಿ ಯೋಜನೆಯಿಂದ ನಿರುದ್ಯೋಗಿ ಯುವಕರಿಗೆ ಸಾಕಷ್ಟು ಅನುಕೂಲವಾಗಿದೆ. ಶಕ್ತಿ ಯೋಜನೆ ಜಾರಿಯಿಂದಾಗಿ ವಿಜಯನಗರ ಜಿಲ್ಲೆಯ ಸಾರಿಗೆ ಸಂಸ್ಥೆಗೆ ಪ್ರತಿ ಮಾಹೆಗೆ ಕೋಟಿಗಟ್ಟಲೇ ಆದಾಯ ಬರುತ್ತಿದೆ. ಸಂಸ್ಥೆಯು ಮೊದಲಿಗಿಂತ ಹೆಚ್ಚಿನ ರೀತಿಯಲ್ಲಿ ಬಲವರ್ಧನೆಯಾಗಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯಪ್ಪ.ಬಿ ಮಾತನಾಡಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್‌ಎನ್‌ಎಫ್ ಇಮಾಮ್ ನಿಯಾಜಿ, ವಾರ್ತಾ ಇಲಾಖೆಯ ಕೆ.ರಾಮಾಂಜನೇಯ, ಕೆಎಸ್‌ಆರ್‌ಟಿಸಿ ರಾಜಶೇಖರ್ ವಾಜಂತ್ರಿ, ಪತ್ರಕರ್ತರು ಭಾಗವಹಿಸಿದ್ದರು.





