ಹೊಸಪೇಟೆ | ಟಿಬಿ ಡ್ಯಾಮ್ ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ

ಹೊಸಪೇಟೆ : ತುಂಗಭದ್ರಾ ಜಲಾಶಯ ಭರ್ತಿ ಆದ ಹಿನ್ನೆಲೆಯಲ್ಲಿ ಎರಡನೆಯ ಬಾರಿಗೆ ಅಪಾರ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ.
ಹೊಸಪೇಟೆ ತಾಲೂಕಿನ ಐತಿಹಾಸಿಕ ವಿಶ್ವ ಪ್ರಸಿದ್ಧ ಹಂಪಿಯ ನದಿ ಪಾತ್ರದಲ್ಲಿ ಇರುವ ವಿಧಿ ವಿಧಾನ ಮಂಟಪಗಳು ಸಾಲು ಸಾಲು ಮಂಟಪಗಳು ಸೇರಿದಂತೆ ಪುರಂದರ ದಾಸರ ಮಂಟಪ ಸಂಪೂರ್ಣವಾಗಿ ಜಲಾವೃತವಾಗಿದೆ.
ಮಲೆನಾಡು ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ, ಭದ್ರ ಹಾಗೂ ವರದಾ ನದಿಗಳು ಭರ್ತಿ ಆದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ವರಹರಿವು ಹೆಚ್ಚಾಗಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ 90,000 ಕ್ಯೂಸೆಕ್ ನೀರು ಒಳಹರಿವು ಹೆಚ್ಚಾಗಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಉಳ್ಳ ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಟಿವಿ ಡ್ಯಾಮ್ ನ 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿರುವುದರಿಂದ ಸ್ಟಾಪ್ ಲಾಗ್ ಅಳವಡಿಸಲಾಗಿತ್ತು ಹಾಗಾಗಿ ಈ ಬಾರಿ ಡ್ಯಾಮ್ ನ ಭದ್ರತಾ ದೃಷ್ಟಿಯಿಂದ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ತಜ್ಞರ ತಂಡ ವರದಿ ನೀಡಿತ್ತು. ತಜ್ಞರ ವರದಿ ಆಧರಿಸಿ ಟಿ ಬಿ ಡ್ಯಾಮ್ ಮಂಡಳಿ ಈ ಬಾರಿ 80 ಟಿಎಂಸಿ ಮಾತ್ರ ನೀರು ಸಂಗ್ರಹಿಸಲು ನಿರ್ಧರಿಸಿತ್ತು. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಜಲಾಶಯದಿಂದ ಕ್ರಸ್ಟ್ ಗೇಟ್ ಗಳನ್ನು ಓಪನ್ ಮಾಡುವುದರ ಮೂಲಕ ಎರಡನೆಯ ಬಾರಿಗೆ ನದಿ ಪಾತ್ರಕ್ಕೆ ನೀರನ್ನು ಹರಿ ಬಿಡಲಾಗಿದೆ.
1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಪಾತ್ರದ ಸಾರ್ವಜನಿಕ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ನದಿ ಪಾತ್ರಕ್ಕೆ ಇಳಿಯದಂತೆ ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ತುಂಗಭದ್ರಾ ಜಲಾಶಯ ಭರ್ತಿಯಾದ ಬಳಿಕ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ನದಿ ಪಾತ್ರಕ್ಕೆ ನೀರು ಹರಿ ಬಿಡುವುದು ವಾಡಿಕೆ. ಆದರೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಬಾಗಿನ ಅರ್ಪಿಸದೆ ಒಂದೇ ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದರೂ, ಸಹ ಇದುವರೆಗೂ ಜಲಾಶಯಕ್ಕೆ ಬಾಗಿನ ಅರ್ಪಿಸದೆ ಇರುವುದು ದುರ್ದೈವದ ಸಂಗತಿ.
-ಟಿ.ನಾಗರಾಜ್ ತಳವಾರ್, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ವಿಜಯನಗರ ಜಿಲ್ಲೆ.







