ಮಕ್ಕಳ ನ್ಯೂನತೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಪುನಶ್ಚೇತನಕ್ಕೆ ಒತ್ತು ನೀಡಬೇಕು: ಎಂ.ವಿ. ಅಂಜಿನಪ್ಪ

ಹರಪನಹಳ್ಳಿ: ಮಕ್ಕಳಲ್ಲಿರುವ ನ್ಯೂನತೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆ, ಪುನಶ್ಚೇತನ ಹಾಗೂ ವಿಶೇಷ ಶಿಕ್ಷಣದ ಮೂಲಕ ಅವರ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪೋಷಕರು ಹಾಗೂ ಸಮಾಜ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹೇಳಿದರು.
ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವ ಸಹಾಯ ಸಂಘದ ಕಚೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವ ಸಹಾಯ ಸಂಘ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಬಿಲಿಟಿ (ಎಪಿಡಿ), ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯನಗರ ಜಿಲ್ಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ 0 ರಿಂದ 8 ವರ್ಷದೊಳಗಿನ ಮಕ್ಕಳಲ್ಲಿರುವ ನ್ಯೂನತೆಗಳನ್ನು ಶೀಘ್ರ ಪತ್ತೆಹಚ್ಚುವಿಕೆ ಹಾಗೂ ಆರಂಭಿಕ ಶಿಕ್ಷಣ–ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಕಂಡುಬರುವ ದೈಹಿಕ, ಮಾನಸಿಕ, ಬೌದ್ಧಿಕ, ಶ್ರವಣ, ದೃಷ್ಟಿ ಸೇರಿದಂತೆ ವಿವಿಧ ರೀತಿಯ ನ್ಯೂನತೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿದರೆ, ಅಗತ್ಯವಿರುವ ಚಿಕಿತ್ಸೆ ಮತ್ತು ಪುನಶ್ಚೇತನ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಕಲಿಕೆಯ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ರತ್ನ ಬೆಣ್ಣೆ ಮಾತನಾಡಿ,ಮಕ್ಕಳಲ್ಲಿ ಯಾವುದೇ ರೀತಿಯ ಬೆಳವಣಿಗೆ ವಿಳಂಬ ಅಥವಾ ನ್ಯೂನತೆ ಕಂಡುಬಂದರೆ ಪೋಷಕರು ಆತಂಕಪಡುವ ಅಗತ್ಯವಿಲ್ಲ. ಬದಲಾಗಿ ತಜ್ಞರ ಸಲಹೆ ಪಡೆದು ಆರಂಭಿಕ ಹಂತದಲ್ಲೇ ಅಗತ್ಯ ಚಿಕಿತ್ಸೆ ಹಾಗೂ ಪುನಶ್ಚೇತನ ಸೇವೆಗಳನ್ನು ಕೊಡಿಸಬೇಕು. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳಿಗೆ ತಲುಪುವಂತಾಗಬೇಕು. ಅರ್ಹ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು ಕೂಡ ಮುಖ್ಯವಾಗಿದೆ” ಎಂದರು.
ಎಪಿಡಿ ಸಂಸ್ಥೆ ಸಂಯೋಜಕರಾದ ಸ್ಮಿತಾ ಗೌಡ,ಮಾತನಾಡಿ ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದಂತೆ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಆರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದರಿಂದ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಸಾಧ್ಯವಾಗಲಿದೆ ಎಂದರು.
ಈ ವೇಳೆ 0 ರಿಂದ 8 ವರ್ಷದೊಳಗಿನ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವ ಸಹಾಯ ಸಂಘದ ಕಾರ್ಯದರ್ಶಿ ಶ್ವೇತಾ, ಎಚ್. ವಿರೇಶ್, ಬಿ. ಸಾವಿತ್ರಮ್ಮ, ಮಾಜಿ ನಗರಸಭೆ ಸದಸ್ಯ ವಸಂತಪ್ಪ, ಸಿವಿಲ್ ಕಂಟ್ರಾಕ್ಟರ್ ನದೀಮ್ ಅಕ್ರಮ್, ಸೇರಿದಂತೆ ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.






