ಅಕ್ರಮ ಮದ್ಯಮಾರಾಟ, ಕಾನೂನು ಬಾಹಿರ ಚಟುವಟಿಕೆಗಳಿಗೆ ಶೀಘ್ರ ಕಡಿವಾಣ ಹಾಕಬೇಕು : ಸಚಿವ ಝಮೀರ್ ಅಹ್ಮದ್

ವಿಜಯನಗರ(ಹೊಸಪೇಟೆ) : ಜಿಲ್ಲೆಯಲ್ಲಿ ಹಾಲು ಮಾರಾಟಕ್ಕಿಂತ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿದೆ, ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಇಲ್ಲದಂತಾಗಿದೆ ಎಂದು ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿವೆ. ಶೀಘ್ರವೇ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ವಕ್ಫ್ ಮತ್ತು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಝಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಮಟ್ಕಾ, ಜೂಜಾಟ, ಐಪಿಎಲ್ ಭೆಟ್ಟಿಂಗ್, ಅಕ್ರಮ ಮರಳು ಸಾಗಣೆ ಸೇರಿದಂತೆ ಅನೇಕ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಗೂಡಂಗಡಿ, ತರಕಾರಿ ಅಂಗಡಿ ಸೇರಿದಂತೆ ಮನೆಮನೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಬಡವರಿಗೆ ಮಾರಕವಾಗಿರುವ ಇಂತಹ ಚಟುವಟಿಕೆಗೆ ಶೀಘ್ರವೇ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಸಮನ್ವಯತೆಯಿಂದ ಇದಕ್ಕೆ ಕಡಿವಾಣ ಹಾಕಬೇಕು, ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು. ನಾನೇ ಖುದ್ದು ಸಂಸದರು, ಶಾಸಕರೊಂದಿಗೆ ರಹಸ್ಯವಾಗಿ ದಾಳಿಗೆ ಕ್ರಮ ವಹಿಸಲಾಗುತ್ತದೆ. ಅಧಿಕಾರಿಗಳು ನಿರ್ಲಕ್ಷಿಸದಿರಿ ಎಂದು ಎಚ್ಚರಿಕೆ ನೀಡಿದರು.
ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜನಾಯ್ಕ ಮಾತನಾಡಿದರು.







