ಮೇ 20ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಜಂಟಿ ಕ್ರಿಯಾ ಸಮಿತಿ ಆಗ್ರಹ

ಹೊಸಪೇಟೆ: ವೇತನ ಪರಿಷ್ಕರಣೆ, ಬಾಕಿ ವೇತನ ಪಾವತಿ ಹಾಗೂ ವಿವಿಧ ಸೌಲಭ್ಯಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮೇ 20ರ ಬೆಳಿಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ವರ್ಕರ್ಸ್ ಫೆಡರೇಷನ್ (ಎಐಟಿಯುಸಿ), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕರ್ನಾಟಕ ರಾಜ್ಯ ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು), ಕೆ.ಎಸ್.ಆರ್.ಟಿ.ಸಿ. ಪ.ಜಾ. & ಪ.ಪಂ. ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳು ಈ ಜಂಟಿ ಹೋರಾಟದಲ್ಲಿ ಭಾಗವಹಿಸಲಿದೆ.
2024ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಹಾಗೂ 38 ತಿಂಗಳ ವೇತನ ಬಾಕಿಯನ್ನು ಪಾವತಿಸಬೇಕು ಎಂದು ಜಂಟಿ ಕ್ರಿಯಾ ಸಮಿತಿಯ ಮುಖಂಡರಾದ ಬಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಸರ್ಕಾರವು ಫೆಬ್ರವರಿ 18ರಂದು ಹೊರಡಿಸಿದ್ದ ಆದೇಶದಲ್ಲಿ 26 ತಿಂಗಳ ಬಾಕಿ ಹಣ ಪಾವತಿ ಹಾಗೂ 2025ರ ಏಪ್ರಿಲ್ 1ರಿಂದ ವೇತನ ಪರಿಷ್ಕರಣೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ನೌಕರರ ನಿರೀಕ್ಷೆಗೆ ತಕ್ಕದ್ದಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಮಾರ್ಚ್ 2, ಏಪ್ರಿಲ್ 6 ಹಾಗೂ ಏಪ್ರಿಲ್ 17ರಂದು ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆದರೂ ಯಾವುದೇ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ. ಬಳಿಕ ಎಪ್ರಿಲ್ 29ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಬೇಡಿಕೆಗಳಿಗೆ ಸಮರ್ಪಕ ಸ್ಪಂದನೆ ಸಿಗದ ಹಿನ್ನೆಲೆ ಮುಷ್ಕರದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಸಾರಿಗೆ ನೌಕರರು ಕೋವಿಡ್ ಸಂದರ್ಭದಲ್ಲಿ ನೀಡಿದ ಸೇವೆ, “ಶಕ್ತಿ” ಯೋಜನೆ ಯಶಸ್ಸಿಗೆ ನೀಡಿದ ಶ್ರಮ, ದಿನೇದಿನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಹಾಗೂ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದ್ದ ವೇತನ ಪರಿಷ್ಕರಣೆಯ ಪರಂಪರೆಯನ್ನು ಸರಕಾರ ಗಮನಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ನೌಕರರ ಪ್ರಮುಖ ಬೇಡಿಕೆಗಳು
1) 2023 ಡಿಸೆಂಬರ್ 31ರ ಮೂಲ ವೇತನದ ಮೇಲೆ ಶೇ.25ರಷ್ಟು ವೇತನ ಹೆಚ್ಚಳ ಮಾಡಿ 2024 ಜನವರಿ 1ರಿಂದ ಜಾರಿಗೊಳಿಸುವುದು
2) ತುಟ್ಟಿ ಭತ್ಯೆ ವಿಲೀನಗೊಳಿಸಿ ಹೊಸ ವೇತನ ಶ್ರೇಣಿ ರಚಿಸುವುದು
3) ಇತರೆ ಭತ್ಯೆಗಳನ್ನು ಹೆಚ್ಚಿಸುವುದು
4) 2020ರ ಬಾಕಿ ವೇತನವನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರಿಗೆ ಪಾವತಿಸುವುದು
5) 26 ತಿಂಗಳ ಬಾಕಿ ಹಣ 1,272 ಕೋಟಿ ರೂ. ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವುದು
6) ಫಾರಂ-4 ಸೇರಿ ಇತರೆ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಇತ್ಯರ್ಥಗೊಳಿಸುವುದು
ಮೇ 20ರಿಂದ ಎಲ್ಲ ನಿಗಮಗಳ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಶಾಂತಿಯುತ ಮುಷ್ಕರ ನಡೆಸುವಂತೆ ಜಂಟಿ ಕ್ರಿಯಾ ಸಮಿತಿ ಮನವಿ ಮಾಡಿದೆ. ಜೊತೆಗೆ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಸಂಘಟನೆಗಳ ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ನೌಕರರಿಗೆ ಕರೆ ನೀಡಲಾಗಿದೆ.






