ಕೂಡ್ಲಿಗಿಯಲ್ಲಿ ಎಸ್‌ಐಆರ್ ನೋಟಿಸ್ ವಿಚಾರಣೆ ಆರಂಭ; ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ

ವಿಜಯನಗರ/ಕೂಡ್ಲಿಗಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಿತ ನೋಟಿಸ್‌ಗಳ ವಿಚಾರಣೆ ಪ್ರಕ್ರಿಯೆ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಆರಂಭವಾಗಿದ್ದು, ನಿಗದಿತ ದಿನಾಂಕಕ್ಕೆ ಬಂದಿರುವ ಎಲ್ಲ ನೋಟಿಸ್‌ಗಳ ವಿಚಾರಣೆಯನ್ನು ಅದೇ ದಿನ ಪೂರ್ಣಗೊಳಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೆಚ್. ದಾದಾಪೀರ ತಿಳಿಸಿದ್ದಾರೆ.
ಕೂಡ್ಲಿಗಿ ದಂಡಾಧಿಕಾರಿ ಕುಮಾರಿ ನೇತ್ರಾವತಿ ಅವರ ನಿರ್ದೇಶನದಂತೆ ಸೋಮವಾರ ಬೆಳಿಗ್ಗೆ 9.30ರಿಂದ ವಿಚಾರಣೆ ಆರಂಭವಾಗಿದ್ದು, ಸಂಬಂಧಪಟ್ಟ ಬಿಎಲ್‌ಒಗಳ ಉಪಸ್ಥಿತಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಆಯೋಗ ಸೂಚಿಸಿರುವ ಗುರುತಿನ ಚೀಟಿ, ವಿಳಾಸ ಪುರಾವೆ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗಬೇಕು. ದಾಖಲೆಗಳು ಪೂರ್ಣವಾಗಿದ್ದರೆ ವಿಚಾರಣೆ ಕೆಲವೇ ನಿಮಿಷಗಳಲ್ಲಿ ಮುಗಿಯಲಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಚಾರಣೆಗೆ ಆಗಮಿಸುವವರು ಸರತಿ ಸಾಲಿನಲ್ಲಿ ನಿಂತು ತಮ್ಮ ಸರದಿ ಬಂದಾಗ ದಾಖಲೆಗಳನ್ನು ಪರಿಶೀಲನೆಗೆ ನೀಡಬೇಕು. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಹೆಚ್ಚುವರಿ ಮಾಹಿತಿ ಕೇಳಲಿದ್ದು, ದಾಖಲೆಗಳ ಕೊರತೆ ಇದ್ದಲ್ಲಿ ಸ್ಥಳದಲ್ಲೇ ತಿಳಿಸಿ ಪೂರಕ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಪಂಚಾಯಿತಿ ಸಿಬ್ಬಂದಿ ಹಾಗೂ ಬಿಎಲ್‌ಒಗಳ ಸಹಕಾರದೊಂದಿಗೆ ವಿಚಾರಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದ್ದು, ಸಂಬಂಧಿತ ಎಲ್ಲ ಮತದಾರರು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಸಹಕರಿಸಬೇಕು ಎಂದು ತಾಲೂಕು ಆಡಳಿತ ಮನವಿ ಮಾಡಿದೆ.






