ಹಂಪಿ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಪರಿಶೀಲನೆ; ಆರು ವಾರಗಳಲ್ಲಿ ಯುನೆಸ್ಕೋ ತಜ್ಞರ ವರದಿ : ಕವಿತಾ ಎಸ್. ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ವಿಶ್ವವಿಖ್ಯಾತ ಹಂಪಿ ವಿಶ್ವಪಾರಂಪರಿಕ ತಾಣ ಸೇರಿದಂತೆ ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳಿಗೆ ಯುನೆಸ್ಕೋ ಮತ್ತು ಐಕಾಮಾಸ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂದಿನ ಆರು ವಾರಗಳಲ್ಲಿ ತಂಡ ವರದಿ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ ಹಾಗೂ ಯುನೆಸ್ಕೋ ತಜ್ಞರ ಭೇಟಿ ಕುರಿತು ಮಾಹಿತಿ ಹಂಚಿಕೊಳ್ಳಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುನೆಸ್ಕೋ ತಜ್ಞರಾದ ಇಂಡೋನೇಷಿಯಾದ ಜಾರ್ಜ್ ಅಬುಂಗ್ ಹಾಗೂ ಐಕಾಮಾಸ್ ತಜ್ಞರಾದ ಜಪಾನ್‌ನ ಇಶಿತಾ ಶಿಮೋಡಾ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಪ್ರಮುಖ ಸ್ಮಾರಕಗಳ ಸಂರಕ್ಷಣೆ, ನಿರ್ವಹಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಿದರು.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನ, ಕೃಷ್ಣ ದೇವಸ್ಥಾನ, ಲೋಟಸ್ ಮಹಲ್, ಗಗನ್ ಮಹಲ್ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ, ಅವುಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಸಂರಕ್ಷಣಾ ಕ್ರಮಗಳನ್ನು ಅವಲೋಕಿಸಲಾಯಿತು. ಅಂಜನಾದ್ರಿ ಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ನಿರ್ಮಾಣ ಕಾರ್ಯಗಳು, ವಾಣಿಜ್ಯ ಮಳಿಗೆಗಳ ವಿಸ್ತರಣೆ, ಪ್ರವಾಸಿಗರ ನಿರ್ವಹಣೆ ಹಾಗೂ ಸ್ಮಾರಕಗಳ ನೋಟಕ್ಕೆ ಅಡ್ಡಿಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಜ್ಞರು ಪರಿಶೀಲನೆ ನಡೆಸಿದರು. ಹಂಪಿಯನ್ನು ಜೀವಂತ ಸಂಸ್ಕೃತಿಯ ತಾಣವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಥಳೀಯರ ಬದುಕಿಗೂ ಆದ್ಯತೆ :
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಜತೆಗೆ ಸ್ಥಳೀಯ ಜನರ ಜೀವನೋಪಾಯಕ್ಕೂ ಆದ್ಯತೆ ನೀಡುವ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸುವಂತೆ ತಜ್ಞರು ತಿಳಿಸಿದರು. ಪ್ರವಾಸಿ ಮಾರ್ಗದರ್ಶಕರು, ಆಟೋ ಚಾಲಕರು, ಹೋಟೆಲ್ ಕಾರ್ಮಿಕರು, ಅರ್ಚಕರು, ರೈತರು ಹಾಗೂ ಸ್ಥಳೀಯ ಕಲಾವಿದರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಸಮತೋಲನದ ಕ್ರಮಗಳನ್ನು ಕೈಗೊಳ್ಳುವ ಅಗತ್ಯದ ಕುರಿತು ಚರ್ಚಿಸಲಾಯಿತು.
ಸ್ಮಾರಕಗಳ ಸಂರಕ್ಷಣಾ ನಿಯಮಗಳು, ಕೋರ್ ವಲಯದಲ್ಲಿನ ನಿರ್ಬಂಧಗಳು, ಸ್ಥಳೀಯರ ಮನೆ ಮತ್ತು ಆಸ್ತಿಗಳ ರಕ್ಷಣೆ, ಪ್ರವಾಸಿಗರ ಸಂಚಾರ ವ್ಯವಸ್ಥೆ ಹಾಗೂ ಹೋಂಸ್ಟೇ ಸೇರಿದಂತೆ ಸ್ಥಳೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಚರ್ಚೆಗೆ ಬಂದವು. ಸ್ಮಾರಕಗಳ ಐತಿಹಾಸಿಕ ಮಹತ್ವವನ್ನು ಕಾಪಾಡುವುದರ ಜತೆಗೆ ಸ್ಥಳೀಯ ಸಮುದಾಯದ ಬದುಕು ಮತ್ತು ಸಂಸ್ಕೃತಿಯೂ ಉಳಿಯುವಂತೆ ಯೋಜನೆ ರೂಪಿಸುವುದು ಮುಖ್ಯವಾಗಿದೆ ಎಂದು ತಿಳಿಸಲಾಯಿತು.
ಸ್ಥಳ ಪರಿಶೀಲನೆ ಹಾಗೂ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತಜ್ಞರ ತಂಡ ವರದಿ ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ಮುಂದಿನ ಸಂರಕ್ಷಣಾ ಕ್ರಮಗಳು ಹಾಗೂ ಮಾಸ್ಟರ್ ಪ್ಲಾನ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.






