ಕೋಟೆ ಆಂಜನೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಸಿದರೆ ಹೋರಾಟ: ಎಚ್.ಕೆ.ಹಾಲೇಶ್

ಹರಪನಹಳ್ಳಿ: ನಗರದ ಐತಿಹಾಸಿಕ ಪರಂಪರೆವುಳ್ಳ ಶ್ರೀ ಕೋಟೆ ಆಂಜನೇಯ ದೇವಸ್ಥಾನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲು ಮುಂದಾಗಿರುವ ತಾಲೂಕು ಆಡಳಿತದ ಕ್ರಮ ಸರಿಯಲ್ಲ ತಕ್ಷಣ ಅದನ್ನು ತಡೆಹಿಡಿಯಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ, ವಾಲ್ಮೀಕಿ ಸಮಾಜದ ಮುಖಂಡ ಹೆಚ್.ಕೆ.ಹಾಲೇಶ್ ಹೇಳಿದರು.
ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಕೆ.ಹಾಲೇಶ್, ನೂರಾರು ವರ್ಷಗಳ ಇತಿಹಾಸ ಇರುವ ಕೋಟೆ ಆಂಜನೇಯ ದೇವಸ್ಥಾನದ ಪರಂಪರೆ ಸಂಸ್ಕೃತಿಯನ್ನು ಉಳಿಸಲಿಕ್ಕೆ ಆಂಜನೇಯ ಸೇವಾ ಸಮಿತಿಯವರು ನಿರಂತರವಾಗಿ ಶ್ರಮಿಸುವ ಮೂಲಕ ಅಭಿವೃದ್ಧಿಪಡಿಸಿಕೊಂಡು ಬಂದಿದ್ದಾರೆ. ಆದರೆ, ಕೆಲವರು ಕೋಟೆ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ, ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಆದಾಯ ಇಲ್ಲ. ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯೂ ಇಲ್ಲ. ಭಕ್ತರಿಂದ ಬಂದಂತಹ ದೇಣಿಗೆ, ಸಹಕಾರದಿಂದ ಸಮಿತಿಯವರು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಈ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ನೇತೃತ್ವದಲ್ಲಿ ಈಗಲೂ ಅಡಾಕ್ ಸಮಿತಿಯೊಂದು ಜಾರಿಯಲ್ಲಿದೆ. ಆದರೆ ಯಾಕೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ? ಈ ಸಂಬಂಧ ಅನೇಕ ಬಾರಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಿತಿಯಿಂದ ಅರ್ಜಿ ಸಲ್ಲಿಸಿದ್ದೇವೆ. ಆದರೂ ಕೂಡ ಯಾರು ಇತ್ತ ಗಮನ ಹರಿಸಿಲ್ಲ ಎಂದರು.
ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಹಣದ ದುರುಪಯೋಗ ನಡೆದಿಲ್ಲ. ಈಗಾಗಲೇ ತಾಲೂಕಿನ ಅನೇಕ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಸೇರಿವೆ. ಅಲ್ಲಿ ಏನು ಅಭಿವೃದ್ಧಿಯಾಗಿವೆ ಎಂಬುದರ ಕುರಿತು ತಾಲೂಕು ಆಡಳಿತ ಉತ್ತರಿಸಬೇಕು. ಕೋಟೆ ಆಂಜನೇಯ ದೇವಸ್ಥಾನದ ಜಾಗ ಒತ್ತುವರಿಯಾಗಿದೆ. ಈ ಬಗ್ಗೆ ನ್ಯಾಯಲಯದ ಆದೇಶವಿದ್ದರೂ ತಾಲೂಕು ಆಡಳಿತ ಯಾಕೆ ತೆರವುಗೊಳಿಸಲು ಮಂದಾಗುತ್ತಿಲ್ಲ? ಒಂದು ವೇಳೆ ಕೋಟೆ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಮುಂದಾದರೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಹೋರಾಟಗಾರ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಸಾರ್ವಜನಿಕವಾಗಿ ಚರ್ಚೆ ಮಾಡದೆ ಕೋಟೆ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವುದು ಸೂಕ್ತವಲ್ಲ, ಇದರಿಂದ ಭಕ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂದರು.
ಈ ವೇಳೆ ವಿಎಚ್‌ಪಿ ಮುಖಂಡ ಎಚ್.ಎಂ.ಜಗದೀಶ್, ಎಚ್.ವೆಂಕಟೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕೇರಿ ಬಸಪ್ಪ, ಗಿಡ್ಡಳ್ಳಿ ನಾಗರಾಜ್ ದ್ಯಾಮಜ್ಜಿ ದಂಡೆಪ್ಪ, ತಳವಾರ ಅಜ್ಜಯ್ಯ, ಪಟ್ನಮದ ಪರಶುರಾಮ, ಮ್ಯಾಕಿ ಸಣ್ಣ ಹಾಲಪ್ಪ, ಕಮ್ಮಾರ ಹಾಲಪ್ಪ, ಚಿಕ್ಕೆರಿ ಯಂಕಪ್ಪ, ದ್ಯಾಮಜ್ಜಿ ಹನುಮಂತಪ್ಪ, ನಿಟ್ಟೂರು ತಿಮ್ಮಣ್ಣ, ಆಲೂರು ಶ್ರೀನಿವಾಸ, ಗುಂಡಿ ಮಂಜುನಾಥ್, ಬಡಗಿ ಮಂಜು, ಆದಿನಾಥ, ಅಶೋಕ, ತಿಮ್ಮಣ್ಣ, ಚನ್ನಪ್ಪ ಹನುಮಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.






