ಕೊಟ್ಟೂರು | ಅಗ್ನಿ ಅವಘಡ : ಟ್ರಕ್ ಕ್ಯಾಬಿನ್, ಶೆಡ್, ಮೇವಿನ ಬಣವೆಗಳು ಭಸ್ಮ!

ಕೊಟ್ಟೂರು (ವಿಜಯನಗರ): ತಾಲೂಕಿನ ಹರಾಳು ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಭಾರತ್ ಬೆಂಜ್ ಟ್ರಕ್, ಶೆಡ್ ಹಾಗೂ ಜಾನುವಾರುಗಳ ಮೇವಿನ ಬಣವಿಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಪ್ರವೀಣ್ ಕ್ಯಾತನಮರಡಿ ಅವರಿಗೆ ಸೇರಿದ ಭಾರತ್ ಬೆಂಜ್-1214 ಟ್ರಕ್ (KA-16 AA 8286)ನಲ್ಲಿ ರಾತ್ರಿ ಸುಮಾರು 10 ಗಂಟೆಗೆ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದ್ದು, ಟ್ರಕ್‌ನ ಕ್ಯಾಬಿನ್ ಭಾಗ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಟ್ರಕ್‌ಗೆ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲಿದ್ದ ಶೆಡ್ ಹಾಗೂ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೂರು ದೊಡ್ಡ ಮೇವಿನ ಬಣವಿಗಳಿಗೂ ವ್ಯಾಪಿಸಿದೆ. ಪರಿಣಾಮ ಶೆಡ್ ಹಾಗೂ ಮೇವು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ನಂದಿಸಲು ಪ್ರಯತ್ನಿಸಿದರು. ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ್ದರಿಂದ ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ಹರಡುವುದು ತಪ್ಪಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಘಟನೆಯಿಂದ ಟ್ರಕ್ ಮಾಲೀಕ ಪ್ರವೀಣ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.






