ಕೊಟ್ಟೂರು | ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಜಾ ಸೇವಾ ಆಂದೋಲನ ಸಹಕಾರಿ: ಎಂ. ಪ್ರತಿಭಾ
ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ

ಕೊಟ್ಟೂರು (ವಿಜಯನಗರ): ಸಾರ್ವಜನಿಕರು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ ಹೇಳಿದರು.
ತಾಲೂಕಿನ ಚಿರಿಬಿ ಗ್ರಾಮದಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಚೇರಿಗೆ ಬರಲು ಸಾಧ್ಯವಾಗದ ಅಸಹಾಯಕರು ಹಾಗೂ ಸಾರ್ವಜನಿಕರ ಮನೆಬಾಗಿಲಿಗೆ ಅಧಿಕಾರಿಗಳೇ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ನೆರವು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆ, ಬಸ್ ನಿಲ್ದಾಣ, ಗ್ರಂಥಾಲಯ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣ, ರೈತರಿಗೆ ನಿರಂತರ ವಿದ್ಯುತ್ ಪೂರೈಕೆ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, ಸ್ಥಗಿತಗೊಂಡಿರುವ ವಿವಿಧ ಪಿಂಚಣಿಗಳನ್ನು ಮುಂದುವರಿಸುವುದು, ವಾಸದ ಮನೆ ಹಾಗೂ ನಿವೇಶನ ಮಂಜೂರು, ಪಟ್ಟಾ ನೀಡುವಂತೆ ಒಟ್ಟು 30 ಅರ್ಜಿಗಳು ಸಲ್ಲಿಕೆಯಾಗಿವೆ.
ಇವುಗಳಲ್ಲಿ ಆರ್ಡಿಪಿಆರ್ ಇಲಾಖೆಗೆ ಸಂಬಂಧಿಸಿದ 14, ಕಂದಾಯ ಇಲಾಖೆಯ 2, ಶಿಕ್ಷಣ ಇಲಾಖೆಯ 2 ಅರ್ಜಿಗಳು ಹಾಗೂ ಸಣ್ಣ ನೀರಾವರಿ, ಆಹಾರ, ಆರೋಗ್ಯ, ಕೃಷಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ, ಕಾರ್ಮಿಕ ಹಾಗೂ ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದ ತಲಾ ಒಂದು ಅರ್ಜಿ ಸೇರಿವೆ. ಒಟ್ಟು 30 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ನರೇಗಾ ಎಂಡಿ ಎಚ್. ವಿಜಯಕುಮಾರ್, ಕೃಷಿ ಇಲಾಖೆ ಎಡಿ ಮಹಾಂತೇಶ್, ಮುಖ್ಯ ಪಶುವೈದ್ಯಾಧಿಕಾರಿ ಚಂದ್ರ ನಾಯ್ಕ, ಜೆಸ್ಕಾಂ ಎಇಇ ನಾಗರಾಜ, ಕೃಷಿ ಅಧಿಕಾರಿ ಶ್ಯಾಮಸುಂದರ್, ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಎಂಜಿನಿಯರ್ ಮಂಜುನಾಥ ಡಿ.ಎಸ್., ದಂತ ವೈದ್ಯಾಧಿಕಾರಿ ಲಕ್ಷ್ಮಿ, ಇಸಿಒ ರವಿಕುಮಾರ್, ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಪಿಡಿಒ ಹುಲಿಗೆಮ್ಮ, ಗ್ರಾಮ ಆಡಳಿತ ಅಧಿಕಾರಿ ಗುಡ್ಡದ ಕಾವೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ರವಿಕುಮಾರ್ ಮತ್ತು ನಾಗೇಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.






