ಹೊಸಪೇಟೆ | ಗ್ರಾಮ ಪಂಚಾಯತ್, ಗ್ರಾಮದ ಸಮಸ್ಯೆಗಳ ಬಗ್ಗೆ ವಿಧಾನಪರಿಷತ್ ಸದಸ್ಯರಿಗೆ ಮನವಿ : ಸಣ್ಣಕ್ಕಿ ಲಕ್ಷ್ಮಣ್

ಹೊಸಪೇಟೆ: ಕರ್ನಾಟಕ ರಾಜ್ಯದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವ ದಿಸೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಅವಧಿ ಮುಗಿದ ಕೂಡಲೇ 2026 ಜನವರಿ ತಿಂಗಳಲ್ಲಿ ಚುನಾವಣೆಯನ್ನು ನಡೆಸಬೇಕೆಂದು ವಿಧಾನಪರಿಷತ್ ಸದಸ್ಯರ ಬೇಡಿಕೆಗಳು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿಯಲ್ಲೇನಿದೆ?
ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯನ್ನು ಕೊಟ್ಟ ಹೆಗ್ಗಳಿಕೆಯನ್ನು ಹೊಂದಿದೆ. ದಿವಂಗತ ಅಬ್ದುಲ್ ನಝೀರ್ ಸಾಬ್ ಅವರ ಪ್ರಯತ್ನದ ಫಲವಾಗಿ 1987 ರಿಂದ 1992ರ ಅವಧಿಯಲ್ಲಿ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬಂದಿದ್ದ ಮಂಡಲ ಪಂಚಾಯಿತಿ ಮತ್ತು ಜಿಲ್ಲಾ ಪರಿಷತ್ ಆಡಳಿತವು ಅಧಿಕಾರ ವಿಕೇಂದ್ರೀಕರಣ ಮಹತ್ವ ಮತ್ತು ಶಕ್ತಿಯನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸಿತು.
ದೇಶದ ಆಡಳಿತಕ್ಕೆ ತಮ್ಮ ಹೊಸ ವಿಚಾರಗಳ ಮೂಲಕ ಚುರುಕು ಮುಟ್ಟಿಸಿದ್ದ ಅಂದಿನ ಯುವ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಕೂಡ ಕರ್ನಾಟಕದ ಮಾದರಿಯಿಂದ ಪ್ರೇರಣೆ ಪಡೆದಿದ್ದರು. ಅದರ ಪ್ರತಿಫಲವಾಗಿ 1992 ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ದೇಶದಾದ್ಯಂತ ಏಕರೂಪದ 3 ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಕಾಯಿದೆಗೆ ನಮ್ಮ ದೇಶದ ಸಂಸತ್ತು ಅನುಮೋದನೆಯನ್ನು ನೀಡಿತು. ಸಂವಿದಾನದ 73ನೇ ತಿದ್ದುಪಡಿಯನ್ನು ದೇಶದಲ್ಲಿ ಮೊಟ್ಟ ಮೊದಲಿಗೆ 1993ರಲ್ಲಿ ಜಾರಿಗೆ ತಂದ ಕೀರ್ತಿಯೂ ಕರ್ನಾಟಕಕ್ಕೆ ಸಲ್ಲುತ್ತದೆ. ವೀರಪ್ಪಮೊಯಿಲಿಯವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಂದಿನ ಪಂಚಾಯಿತಿ ರಾಜ್ ಸಚಿವ ದಿ.ಎಂ.ವೈ.ಘೋರ್ಪಡೆಯವರ ನಾಯಕತ್ವದಲ್ಲಿ ಕರ್ನಾಟಕ ಪಂಚಾಯಿತಿ ರಾಜ್ ಕಾಯಿದೆ 1993ರ ಅನ್ವಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಿ ದಿವಂಗತ ರಾಜೀವ್ ಗಾಂಧಿಯವರ ಕನಸನ್ನು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ನಡೆಯಿತು
ಆ ನಂತರದಲ್ಲಿ ಕೆಪಿಆರ್ ಕಾಯಿದೆಗೆ ಕಾಲ ಕಾಲಕ್ಕೆ ಅಗತ್ಯ ಇರುವ ಅನೇಕ ತಿದ್ದುಪಡಿಗಳನ್ನು ಮಾಡುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಶಕ್ತಿ ತುಂಬುವ ಕಾರ್ಯ ನಡೆಯುತ್ತಾ ಬಂದಿದೆ. ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಮೇಶ್ ಕುಮಾರ್ ಅಧ್ಯಕ್ಷತೆಯ ಸಮಿತಿಯು ನೀಡಿದ ಶಿಫಾರಸ್ಸುಗಳ ಆಧಾರದಲ್ಲಿ ಕೆ.ಪಿ.ಆರ್ ಕಾಯಿದೆಗೆ 100ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಿ ರಾಜ್ಯದ ಪಂಚಾಯಿತಿ ರಾಜ್ ವ್ಯವಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಗೆ ತರುವ ಮಹತ್ವದ ಕಾರ್ಯ ಕೂಡ ನಡೆದಿದೆ.
ಮುಖ್ಯವಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸದೆ ಗ್ರಾಮ ಸ್ವರಾಜ್ಯದ ಆಶಯಗಳಿಗೆ ವ್ಯತಿರಿಕ್ತವಾಗಿ ಅಧಿಕಾರಶಾಹಿಯ ಆಡಳಿತದ ಹೇರಿಕೆಯನ್ನು ಮಾಡಿದಂತಾಗಿದೆ. ಈ ಕೆಟ್ಟ ವ್ಯವಸ್ಥೆ ಈಗಲೂ ಮುಂದುವರಿದಿದೆ. ಇದರಿಂದ ರಾಜ್ಯ ಸಾವಿರಾರು ಕೋಟಿ ಅಭಿವೃದ್ದಿ ಅನುದಾನದಿಂದ ವಂಚಿತವಾಗುವ ಸ್ಥಿತಿ ಎದುರಾಗಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ಹಿನ್ನಡೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ.
ಈ ಹಿನ್ನೆಲೆಯಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಮಟ್ಟದ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಮ್ಮ ಬೇಡಿಕೆಗಳನ್ನು ಘನ ಸರಕಾರದ ಮುಂದೆ ಇಡುತ್ತಿದ್ದೇವೆ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್ ವಿಧಾನಸಭೆ ಪರಿಷತ್ ಸದಸ್ಯರನ್ನು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಸಲೀಂ ಅಹ್ಮದ್ ರವರು, ಕೆ ಎಸ್ ನವೀನ್ ರವರು .ಬಿ.ಜಿ ಪಾಟೀಲ್ ರವರು, ಮಂಜುನಾಥ ಬಂಡಾರಿರವರು,ಎಸ್. ರವಿ ರವರು,ಕಿಶೋರ್ ಕುಮಾರ್ ಪುತ್ತೂರು ರವರು ಪ್ರದೀಪ್ ಶೆಟ್ಟರ್ ರವರು,ಗೋಪಿನಾಥ್ ರೆಡ್ಡಿರವರು, ಸೂರಜ್ ರೇವಣ್ಣ ರವರು, ದಿನೇಶ್ ಗೂಳಿಗೌಡ ರವರು, ಡಿ.ತಿಮ್ಮಯ್ಯ ರವರು, ಕ.ರಾ.ಗ್ರಾ.ಪಂ.ಸ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಎಚ್.ಆರ್ ಉಪಾಧ್ಯಕ್ಷೆ ಪ್ರಿಯಾಂಕ ಪಿ. ಖಾಜಂಚಿ ಶಶಿಕಲಾ ಎನ್ ಸಹ ಕಾರ್ಯದರ್ಶಿ ರೇವಣಸಿದ್ಧೇಶ್ವರ ಸಂಚಾಲಕರಾದ ತನುಜಾ ರವರು ಸಭೆಯಲ್ಲಿ ಉಪಸ್ಥಿತರಿದ್ದರು.







