ಬಳ್ಳಾರಿಯಲ್ಲಿ ಮೆಗಾಡೇರಿ ನಿರ್ಮಿಸಲಾಗುವುದು: ಶಾಸಕ ರಾಘವೇಂದ್ರ ಹಿಟ್ನಾಳ್

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿಯೇ ಮೆಗಾಡೇರಿ ನಿರ್ಮಿಸಲಾಗುವುದು ಎಂದು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಹಾಗೂ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಶುಕ್ರವಾರದಂದು ನಗರದ ಕೆಎಂಎಫ್‌ನ ಡೈರಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೆಗಾಡೇರಿ ನಿರ್ಮಾಣಕ್ಕೆ ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಬಳಿಯ 15 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದ್ದು, ಈಗಾಗಲೇ ಜಿಲ್ಲಾಡಳಿತಕ್ಕೆ ನೀಡಬೇಕಿರುವ 2.92 ಕೋಟಿ ರೂ. ಹಣ ನೀಡುವ ಬಗ್ಗೆ ನಿರ್ದೇಶಕ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ. ದೇಶದಲ್ಲಿಯೇ ಮಾದರಿ ಮೆಗಾಡೇರಿಯನ್ನಾಗಿ ಬಳ್ಳಾರಿಯಲ್ಲಿ ಸ್ಥಾಪಿಸಲಾಗುವುದು ಎಂದರು.
ರಾಬಕೊವಿ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆಗೆ ಹೆಚ್ಚಿನ ಸಹಕಾರ ನೀಡಲಾಗುವುದು. ಈಗಾಗಲೇ ಕೆಎಂಎಫ್ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿ ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ ಎಂದರು.
ಪ್ರಸ್ತುತ ರಾಬಕೊವಿ ಜಿಲ್ಲಾ ಹಾಲು ಒಕ್ಕೂಟದಲ್ಲಿ 2.43 ಲಕ್ಷ ಲೀ. ಹಾಲು ಉತ್ಪಾದನೆ ಇದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯು 10 ಸಾವಿರ ಲೀ., ವಿಜಯನಗರ ಜಿಲ್ಲೆಯು 1.12 ಲಕ್ಷ ಲೀ., ಕೊಪ್ಪಳ ಜಿಲ್ಲೆಯು 70 ಸಾವಿರ ಲೀ. ಮತ್ತು ರಾಯಚೂರು ಜಿಲ್ಲೆಯು 26 ಸಾವಿರ ಲೀ. ಉತ್ಪಾದನೆ ಇದೆ ಎಂದು ತಿಳಿಸಿದ ಅವರು, ನಾಲ್ಕು ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸಲು ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಮೆಗಾಡೇರಿ ನಿರ್ಮಾಣದ ಕಾಮಗಾರಿಯ ಭೂಮಿಪೂಜೆ ಕಾರ್ಯ ನೆರವೇರಿಸಲು ಕ್ರಿಯಾಯೋಜನೆ ಹಂತ-ಹಂತವಾಗಿ ಕಾರ್ಯರೂಪಕ್ಕೆ ತಂದು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಸೇರಿದಂತೆ ಇತರರೊಡನೆ ಕೊಳಗಲ್ಲು ಗ್ರಾಮದಲ್ಲಿ ಮೇಗಾಡೇರಿ ಸ್ಥಾಪಿಸಲು ಗುರುತಿಸಿದ ಸ್ಥಳವನ್ನು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕಾರಟಗಿಯ ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪ್ರಭುಶಂಕರ್ ಹಾಗೂ ಇತರರಿದ್ದರು.







