ಬರಪೀಡಿತ ಪ್ರದೇಶಗಳಿಗೆ ಸಚಿವ ಝಮೀರ್ ಅಹ್ಮದ್ ಭೇಟಿ; ರೈತರಿಗೆ ಪರಿಹಾರದ ಭರವಸೆ

ಕೂಡ್ಲಿಗಿ/ವಿಜಯನಗರ, ಆ.8: ಮಳೆಯ ಕೊರತೆಯಿಂದ ಬರದ ತೀವ್ರತೆ ಎದುರಿಸುತ್ತಿರುವ ಕೂಡ್ಲಿಗಿ ತಾಲೂಕಿನ ಮರಭ ಗ್ರಾಮಕ್ಕೆ ಸಂಪುಟ ದರ್ಜೆ ಸಚಿವ ಬಿ. ಝಮೀರ್ ಅಹ್ಮದ್ ಖಾನ್ ಭೇಟಿ ನೀಡಿ ರೈತರ ಹೊಲಗಳನ್ನು ಪರಿಶೀಲಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಬಿತ್ತನೆಯಾಗದೆ ಖಾಲಿ ಉಳಿದ ಜಮೀನುಗಳು ಹಾಗೂ ಶೇ.60ರಷ್ಟು ಬಿತ್ತನೆಯಾದರೂ ಮೊಳಕೆಯೊಡೆಯದ ಬೆಳೆಗಳನ್ನು ವೀಕ್ಷಿಸಿದ ಸಚಿವರು, ರೈತರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಮಾತನಾಡಿ, ಈ ಭಾಗ ಸಂಪೂರ್ಣ ಮಳೆ ಆಶ್ರಿತ ಪ್ರದೇಶವಾಗಿದ್ದು, ಮುಂಗಾರು ವಿಫಲವಾದಾಗ ರೈತರು ಸಾಲದ ಹೊರೆ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಸಚಿವರ ಗಮನಕ್ಕೆ ತಂದರು.
ರೈತರಿಗೆ ಧೈರ್ಯ ತುಂಬಿದ ಸಚಿವ ಝಮೀರ್ ಅಹ್ಮದ್ ಖಾನ್, “ಆಗಸ್ಟ್ 15ರೊಳಗೆ ಬರ ಪರಿಸ್ಥಿತಿಯ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಮ್ ಷಾ, ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






