ವಿಜಯನಗರ | ಒಂದು ವರ್ಷದಲ್ಲಿ 40 ಸಾವಿರ ಅರ್ಜಿಗಳ ವಿಲೇವಾರಿ: ಮಾಹಿತಿ ಹಕ್ಕು ಆಯುಕ್ತ ಬಿ. ವೆಂಕಟಸಿಂಗ್

ಹೊಸಪೇಟೆ /ವಿಜಯನಗರ: ಸಾರ್ವಜನಿಕರಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಮಾಹಿತಿ ಆಯೋಗವು ಸಕ್ರಿಯವಾಗಿ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಕಲಬುರ್ಗಿ ಪೀಠದ ಮಾಹಿತಿ ಹಕ್ಕು ಆಯುಕ್ತ ಬಿ. ವೆಂಕಟಸಿಂಗ್ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಡಳಿತದ ಸಹಯೋಗದಲ್ಲಿ ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಸಂದರ್ಭದಲ್ಲಿ ಅಧಿಕಾರಿಗಳಲ್ಲಿ ಉಂಟಾಗುವ ಗೊಂದಲ, ಅನುಮಾನ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ತಲುಪಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೊದಲ ಹಂತದ ಕಾರ್ಯಾಗಾರಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ತಿಳಿಸಿದರು.
2025ರ ಫೆಬ್ರವರಿಯಲ್ಲಿ ಆರು ಜನ ಮಾಹಿತಿ ಆಯುಕ್ತರು ಅಧಿಕಾರ ಸ್ವೀಕರಿಸಿದ ಬಳಿಕ ಹಾಗೂ ಕಳೆದ ಅಕ್ಟೋಬರ್‌ನಲ್ಲಿ ಮತ್ತೆ ಮೂವರು ಆಯುಕ್ತರು ಅಧಿಕಾರ ವಹಿಸಿಕೊಂಡ ನಂತರ ಆಯೋಗದ ಕಾರ್ಯಕ್ಷಮತೆ ಗಣನೀಯವಾಗಿ ಹೆಚ್ಚಿದೆ. ಅಧಿಕಾರ ಸ್ವೀಕಾರದ ವೇಳೆ ಆಯೋಗದಲ್ಲಿ ಸುಮಾರು 56 ಸಾವಿರ ಅರ್ಜಿಗಳು ಬಾಕಿ ಇದ್ದವು. ಆದರೆ ಕೇವಲ ಒಂದು ವರ್ಷದ ಅವಧಿಯಲ್ಲಿ ಸುಮಾರು 40 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಆಯೋಗ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಿದರು.
2010ರಿಂದ 2020ರವರೆಗೆ ಬಾಕಿ ಉಳಿದಿದ್ದ ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಹಳೆಯ ಪ್ರಕರಣಗಳ ಪೈಕಿ ಶೇಕಡಾ 75ರಷ್ಟು ಪ್ರಕರಣಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 2023 ಹಾಗೂ 2024ನೇ ಸಾಲಿನ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದರು.
ಕಲಬುರ್ಗಿ ಪೀಠದ ವ್ಯಾಪ್ತಿಯ ರಾಯಚೂರು, ಕಲಬುರ್ಗಿ, ಬಳ್ಳಾರಿ, ವಿಜಯನಗರ, ಯಾದಗಿರಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ ಅಧಿಕಾರ ವಹಿಸಿಕೊಂಡಾಗ 6,200 ಅರ್ಜಿಗಳು ಬಾಕಿ ಇದ್ದವು. 2025ರ ನವೆಂಬರ್ 24ರಿಂದ ವಿಚಾರಣೆ ಆರಂಭಿಸಿ ಇದುವರೆಗೆ ನಡೆದ 101 ದಿನಗಳ ಕಲಾಪಗಳಲ್ಲಿ 3,537 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದ್ದು, ಅವುಗಳಲ್ಲಿ 1,548 ಪ್ರಕರಣಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೇಜವಾಬ್ದಾರಿ ಅಧಿಕಾರಿಗಳಿಗೆ ದಂಡ:
ಮಾಹಿತಿ ನೀಡಲು ವಿಳಂಬ ಮಾಡುವ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ 101 ದಿನಗಳಲ್ಲಿ ಮಾಹಿತಿ ನೀಡಲು ವಿಫಲರಾದ ಅಧಿಕಾರಿಗಳ ಮೇಲೆ ಒಟ್ಟು ₹4.33 ಲಕ್ಷ ದಂಡ ವಿಧಿಸಲಾಗಿದೆ. ಜೊತೆಗೆ ಮಾಹಿತಿ ಪಡೆಯಲು ವಿಳಂಬವಾದ ಪರಿಣಾಮ ಅರ್ಜಿದಾರರು ಅನುಭವಿಸಿದ ನಷ್ಟವನ್ನು ಪರಿಗಣಿಸಿ ₹38 ಸಾವಿರ ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾವಾರು ಬಾಕಿ ಅರ್ಜಿಗಳ ವಿವರ:
ಪ್ರಸ್ತುತ ಕಲಬುರ್ಗಿ ಪೀಠದ ವ್ಯಾಪ್ತಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ 2,337, ಕಲಬುರ್ಗಿಯಲ್ಲಿ 1,318, ಬಳ್ಳಾರಿಯಲ್ಲಿ 835, ಕೊಪ್ಪಳದಲ್ಲಿ 650, ವಿಜಯನಗರದಲ್ಲಿ 611, ಯಾದಗಿರಿಯಲ್ಲಿ 580 ಹಾಗೂ ಬೀದರ್ ಜಿಲ್ಲೆಯಲ್ಲಿ 400 ಅರ್ಜಿಗಳು ವಿಚಾರಣೆಗೆ ಬಾಕಿ ಇವೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಬಳ್ಳಾರಿ, ಕೊಪ್ಪಳ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಕಾರ್ಯಾಗಾರಗಳು ಈಗಾಗಲೇ ಪೂರ್ಣಗೊಂಡಿದ್ದು, ವಿಜಯನಗರ ಐದನೇ ಜಿಲ್ಲೆಯಾಗಿದೆ. ಮುಂದಿನ ದಿನಗಳಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇಡೀ ದೇಶದಲ್ಲಿಯೇ ಕರ್ನಾಟಕ ಮಾಹಿತಿ ಆಯೋಗವು ಅತ್ಯಂತ ತತ್ಪರತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಹಿತಿ ಆಯುಕ್ತರಾದ ಕೆ. ಬದ್ರುದ್ದೀನ್ ಹಾಗೂ ಡಾ. ಹರೀಶಕುಮಾರ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.






