ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಹೆಚ್ಚಿನ ಲಾಭವಾಗಿದೆ : ಸಚಿವ ಝಮೀರ್ ಅಹ್ಮದ್

ವಿಜಯನಗರ : ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್‌ಗಳ ಕೊರತೆಯಿಂದ ಇತರೆ ವಾಹನಗಳನ್ನು ಅವಲಂಬಿಸಬೇಕಾಗಿದ್ದು, ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬಿ.ಜೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಬಸ್‌ಗಳ ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತಿತೆಂದು ಹೇಳಿದರು.
ಪೋಕ್ಸೋ ತಡೆಗೆ ಜಾಗೃತಿ :
ಹಾಸ್ಟೆಲ್ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಪೋಕ್ಸೋ ತಡೆಗೆ ಜಾಗೃತಿ ಮೂಡಿಸುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರ ಕಳುಹಿಸುವಾಗ ಪೋಷಕರ ಅನುಮತಿ ಪಡೆಯುವುದು ಕಡ್ಡಾಯವಾಗಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಆರ್.ಓ (RO) ನೀರು ಪೂರೈಕೆ ಜಾರಿಗೆ ತರಬೇಕು. ಕೆಲವು ಹಾಸ್ಟೆಲ್‌ಗಳಲ್ಲಿ ಆರ್.ಓ ಇಲ್ಲದ ಕಾರಣ, ವಿದ್ಯಾರ್ಥಿಗಳು ಶುದ್ಧಿ ಮಾಡದ ನೀರು ಕುಡಿಯುತ್ತಿದ್ದಾರೆ. ಇದರಿಂದ ಹೃದ್ರೋಗ, ಪಿತ್ತಜನಕಾಂಗ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಆರ್.ಓ ಅಳವಡಿಕೆ ಮೊದಲ ಆದ್ಯತೆಯಾಗಿ ನಡೆಯಬೇಕು.
ನಿರಂತರ ಮಳೆಯ ಪರಿಣಾಮವಾಗಿ ರೈತರ ಬೆಳೆ ನಷ್ಟ ಉಂಟಾಗಿದೆ. ಹಡಗಲಿ ಹಾಗೂ ಹರಪನಹಳ್ಳಿ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆ ಹೆಚ್ಚು ಹಾನಿಗೊಂಡಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ನಿಖರ ಅಂಕಿ ಅಂಶ ಸಂಗ್ರಹಿಸಿ ಪರಿಹಾರ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಬೆಂಗಳೂರಿನ ಹಗರಿಬೊಮ್ಮನಹಳ್ಳಿ ವಿಳಾಸದಲ್ಲಿ ಸುಳ್ಳು ಯುಡಿಐಡಿ ದಾಖಲೆ ಸೃಷ್ಟಿಸಿ ಮೆಡಿಕಲ್ ಸೀಟ್ ಪಡೆಯುವ ಬಗ್ಗೆ ವರದಿಯಾಗಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ನಿರ್ದೇಶನ ನೀಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜೂ ಅಡ್ಡೆ ಜಾಲಗಳು ಇರುವುದನ್ನು ಶಾಸಕರು ಸೂಚಿಸಿದರು. ಈ ಅಬಕಾರಿ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷೆಗೆ ವೇಗ ನೀಡಲು ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಾಗಿದೆ. ವಿಜಯನಗರ ಜಿಲ್ಲೆ ರಾಜ್ಯದಲ್ಲಿ ಸಮೀಕ್ಷಾ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ವೇಗ ಹೆಚ್ಚಾಗಲಿದೆ.
ಸಭೆಯಲ್ಲಿ ಸಂಸದರಾದ ಈ.ತುಕಾರಾಮ್, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜನಾಯ್ಕ, ಹಡಗಲಿ ಶಾಸಕ ಕೃಷ್ಣನಾಯ್ಕ, ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಜಗಳೂರು ಶಾಸಕ ಬಿ. ದೇವೆಂದ್ರಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಶಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಅನುಪಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.







