ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಜಾಸೇವಾ ಆಂದೋಲನ ಪರಿಣಾಮಕಾರಿ: ಶಾಸಕ ಡಾ.ಶ್ರೀನಿವಾಸ ಎನ್.ಟಿ.

ಕೊಟ್ಟೂರು (ವಿಜಯನಗರ) : ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಲ್ಲೇ ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ ಎನ್.ಟಿ. ಹೇಳಿದರು.
ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ “ಪ್ರಜಾಸೇವಾ ಆಂದೋಲನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ “ನಮ್ಮ ಶಾಸಕರು ಮನೆ ಮನೆಗೆ” ಅಭಿಯಾನದ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಲಾಗಿದೆ. ನಾಗರಕಟ್ಟೆ, ಉಜ್ಜಿನಿ, ಕಾಳಾಪುರ ಹಾಗೂ ನಿಂಬಳಗೇರಿ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗಿದ್ದು, ತೂಲಹಳ್ಳಿ ಗ್ರಾಮದಲ್ಲಿ ಪ್ರಜಾಸೇವಾ ಆಂದೋಲನದೊಂದಿಗೆ ಆ ಅಭಿಯಾನ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡದೆ ಜನಸೇವೆಗೆ ಆದ್ಯತೆ ನೀಡಬೇಕು. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಾಧ್ಯವಾಗುತ್ತದೆ ಎಂದರು.
ಮನೆ, ನಿವೇಶನ, ವಿದ್ಯುತ್, ರಸ್ತೆ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸಮಸ್ಯೆಗಳ ಪರಿಹಾರವೇ ನಮ್ಮ ಆದ್ಯ ಕರ್ತವ್ಯವಾಗಿದೆ. ನಿರಂತರ ವಿದ್ಯುತ್ ಸರಬರಾಜಿಗಾಗಿ ಈಗಿರುವ ಟ್ರಾನ್ಸ್‌ಫಾರ್ಮರ್‌ಗಳ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತೂಲಹಳ್ಳಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕರು ತಿಳಿಸಿದರು.
ಪ್ರಜಾಸೇವಾ ಕಾರ್ಯಕ್ರಮ ಜನರು ಹೊತ್ತು ತರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಬೇಕು ಎಂದು ಅವರು ಆಶಿಸಿದರು.
ತಹಶೀಲ್ದಾರ್ ಅಮರೇಶ್ ಜಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಡಿ. ದುರುಗಪ್ಪ, ಎಪಿಎಂಸಿ ಕಾರ್ಯದರ್ಶಿ ಈರಣ್ಣ, ಮುಖ್ಯ ಪಶುವೈದ್ಯಾಧಿಕಾರಿ ಚಂದ್ರನಾಯ್ಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಕುಬೇರ ಆಚಾರ್, ಲೋಕೋಪಯೋಗಿ ಇಲಾಖೆಯ ಎಇಇ ಜಿ. ಬಸವರಾಜ್, ಟಿಎಚ್‌ಒ ಪ್ರದೀಪ್ ಎಸ್.ಪಿ., ಗ್ರೇಡ್–2 ತಹಶೀಲ್ದಾರ್ ಎಂ. ಪ್ರತಿಭಾ, ಅರಣ್ಯ ಇಲಾಖೆಯ ಆರ್‌ಎಫ್‌ಒ ಎ. ಗುಡ್ಡಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮ ಆಡಳಿತಾಧಿಕಾರಿ ಸಿದ್ದೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಹಣಿ ತಿದ್ದುಪಡಿ, ವಿವಿಧ ಮಾಶಾಸನಗಳು, ಪಟ್ಟಾ, ಮನೆ ಹಾಗೂ ನಿವೇಶನ, ತ್ರಿಚಕ್ರ ವಾಹನ ಸೌಲಭ್ಯ, ಚರಂಡಿ ದುರಸ್ತಿ, ಹನುಮನಹಳ್ಳಿ ಶಾಲೆಯ ಅಭಿವೃದ್ಧಿ, ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸುವುದು, ಕೆರೆ ತುಂಬಿಸುವುದು, ಗೃಹಲಕ್ಷ್ಮಿ ಯೋಜನೆ ಹಾಗೂ ಸಾರಿಗೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಗಳನ್ನು ಸಾರ್ವಜನಿಕರು ಶಾಸಕರಿಗೆ ಸಲ್ಲಿಸಿದರು.






