ಈಡಿ ದುರ್ಬಳಕೆ ಆರೋಪಿಸಿ ವಿಜಯನಗರದಲ್ಲಿ ಪ್ರತಿಭಟನೆ
ಸತೀಶ್ ಜಾರಕಿಹೊಳಿ ವಿರುದ್ಧದ ದಾಳಿ ಖಂಡನೆ; ರಾಷ್ಟ್ರಪತಿಗಳಿಗೆ ಮನವಿ

ಹೊಸಪೇಟೆ/ವಿಜಯನಗರ: ಜಾರಿ ನಿರ್ದೇಶನಾಲಯ (ಈಡಿ) ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ದ್ವೇಷಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಮಾನವ ಬಂಧುತ್ವ ವೇದಿಕೆ ಹಾಗೂ ವಿಜಯನಗರ ಜಿಲ್ಲಾ ಸಂವಿಧಾನ ಸಂರಕ್ಷಣಾ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ ತಾಲೂಕು ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂವಿಧಾನಿಕ ಮೌಲ್ಯಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಇ.ಡಿ.ಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳ ನಾಯಕರು ಹಾಗೂ ಜನಪ್ರತಿನಿಧಿಗಳನ್ನು ರಾಜಕೀಯವಾಗಿ ಹತ್ತಿಕ್ಕಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಆಶಯಗಳಿಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿದರು.
ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳ ಕುರಿತು ಸೂಕ್ತ ಪರಿಶೀಲನೆ ನಡೆಸಬೇಕು. ತನಿಖಾ ಸಂಸ್ಥೆಗಳು ಯಾವುದೇ ರಾಜಕೀಯ ಒತ್ತಡವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಸೋಮಶೇಖರ್ ಬಣ್ಣದಮನೆ, ಡಿ. ವೆಂಕಟರಮಣ, ವಕೀಲ ಹೆಚ್. ಮಹೇಶ್, ಸಣ್ಣವೀರಪ್ಪ, ಆಟೋ ಚಾಲಕರ ಸಂಘದ ಮುಖ್ಯಸ್ಥ ಕೃಷ್ಣ, ಜೆ.ಸಿ. ಈರಣ್ಣ, ರಾಮಚಂದ್ರ ಬಾಬು, ಬೋರಸ್ವಾಮಿ, ಪ್ರಮೋದ್ ಪುಣ್ಯಮೂರ್ತಿ, ರಾಮ್ ಮೋಹನ್, ಶ್ರೀನಿವಾಸ್, ಲಿಂಗಣ್ಣ ನಾಯಕ್, ಗಿರೀಶ್, ಹುಲುಗಪ್ಪ, ಸುನಿಲ್ ಕುಮಾರ್, ಡಮಣಿ ಅಂಬರೀಶ್, ಪ್ರಕಾಶ್, ಸಂದೀಪ್, ಚಂದ್ರಶೇಖರ್, ಯೋಹನ್, ಸಜ್ಜಾದ್ ಖಾನ್, ಇಂತಿಯಾಜ್, ಅಲ್ಲಾಭಕ್ಷಿ, ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.






