ಮಹಿಳೆಯರು ಕುಟುಂಬ ನಿರ್ವಹಣೆ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು: ಪಿಎಸ್‌ಐ ಕೆ ನಾಗರತ್ನ

ಹರಪನಹಳ್ಳಿ: ದೇವರ ತಿಮಲಾಪುರ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶನಿವಾರ ತಾಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಮತ್ತು ವಿಚಾರ ಗೋಷ್ಠಿ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಪಿಎಸ್‌ಐ ಕೆ ನಾಗರತ್ನ, ಮಹಿಳೆಯರು ಮನೆಯಿಂದ ಯಾವುದೇ ಸಭೆ ಸಮಾರಂಭಗಳಿಗೆ ತೆರಳಿದಾಗ ನಿಮ್ಮ ಬಂಗಾರದ ಒಡವೆಗಳ ಬಗ್ಗೆ ಹೆಚ್ಚಿನ ಗಮನವಿರಬೇಕು. ಪೋಲೀಸ್ ಇಲಾಖೆ ಮಹಿಳೆಯರ ರಕ್ಷಣೆಗಾಗಿ ವಿಜಯ ಪೋಲೀಸ್ ಪಡೆಯನ್ನು ನೇಮಿಸಿದೆ. ಮಹಿಳೆಯರ ಅಭಿವೃದ್ದಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚಿತ್ರದುರ್ಗ ಧರ್ಮಸ್ಥಳ ಸಂಘದ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ. ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಮಾನವಿದೆ, ತಾಯಂದಿರು ಹೆಚ್ಚು ಮೊಬೈಲ್, ಟಿವಿಗಳಿಗೆ ಮಾರು ಹೋಗದೆ ತನ್ನ ಕುಟುಂಬ ಮತ್ತು ಮಕ್ಕಳ ಶಿಕ್ಷಣದ ಜೊತೆಗೆ ಸಂಸ್ಕಾರ, ನಮ್ಮ ಪರಂಪರೆಯ ಸಂಸ್ಕೃತಿಯನ್ನು ಕಲಿಸಿಕೊಡಬೇಕು ಎಂದರು.
ಹೆಣ್ಣು ಕೇವಲ ಕುಟುಬಂಕ್ಕೆ ಸೀಮಿತವಾಗಿರದೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು, ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯು ಕಾರ್ಯ ನಿರ್ವಹಿಸುತ್ತಿದ್ದಾಳೆ. ಧರ್ಮಸ್ಥಳ ಸಂಘ ನೀಡುವ ಸಾಲ ಸೌಲಭ್ಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎನ್ ಎಸ್ ಮಮತಾ, ಕುಸುಮಾ ಜಗದೀಶ್, ಕ್ಷೇತ್ರ ಯೋಜನಾಧಿಕಾರಿ ಬಾಬು, ಗೀತಾ, ಅನಿತಾ ಮತ್ತು ಉಪನ್ಯಾಸಕಿ ಸುವರ್ಣ ಆರುಂಡಿ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮೇಲ್ವಿಚಾರಕಿಯರು ಹಾಗೂ ಸೇವಾ ಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.







