ಹೂವಿನಹಡಗಲಿಯಲ್ಲಿ ಸೆ.3ರಿಂದ ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ

ಹೂವಿನಹಡಗಿ/ವಿಜಯನಗರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ವತಿಯಿಂದ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಹಾಗೂ ಮದರ್ ಶಿಕ್ಷಣ ಸಮುಚ್ಚಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 3ರಿಂದ 6ರವರೆಗೆ ಹೂವಿನಹಡಗಲಿಯ ಮದರ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಸೆಪ್ಟೆಂಬರ್ 3ರಂದು ಸಂಜೆ 5 ಗಂಟೆಗೆ ಮದರ್ ಶಿಕ್ಷಣ ಸಮುಚ್ಚಯದ ನೂತನ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 4ರಂದು ಸಾಹಿತ್ಯೋತ್ಸವದ ಧ್ವಜಾರೋಹಣ ನಡೆಯಲಿದ್ದು, ಸೆಪ್ಟೆಂಬರ್ 5 ಮತ್ತು 6ರಂದು ರಾಜ್ಯ ಮಟ್ಟದ ಸಾಹಿತ್ಯೋತ್ಸವ ಜರುಗಲಿದೆ. ರಾಜ್ಯದ 27 ಜಿಲ್ಲೆಗಳಿಂದ ಸುಮಾರು 2,000 ಆಯ್ದ ಪ್ರತಿಭೆಗಳು ಪಾಲ್ಗೊಳ್ಳಲಿದ್ದು, 9 ವೇದಿಕೆಗಳಲ್ಲಿ 150ಕ್ಕೂ ಅಧಿಕ ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿವೆ.
ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಸಾಹಿತ್ಯೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಖ್ಯಾತ ಸಾಹಿತಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಡೋಜ ಕುಂ. ವೀರಭದ್ರಪ್ಪ ಉದ್ಘಾಟಿಸಲಿದ್ದಾರೆ. ಸೆಪ್ಟೆಂಬರ್ 6ರಂದು ಸಂಜೆ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಸಾಹಿತ್ಯೋತ್ಸವ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್‌ಹಿಕಮಿ, ಸ್ವಾಗತ ಸಮಿತಿ ಅಧ್ಯಕ್ಷ ವಾರದಾ ಗೌಸ್ ಮೊಯಿದೀನ್, ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷ ಅಶ್ರಫ್ ಸಖಾಫಿ ದಾವಣಗೆರೆ, ಕನ್ವೀನರ್ ಉಬೈದುಲ್ಲಾಹ್ ಮಂಗಳೂರು, ಕೋಶಾಧಿಕಾರಿ ಸಿನಾನ್ ಸಖಾಫಿ ಅಲ್‌ಹಿಕಮಿ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಸಯ್ಯದ್ ಯೂಸುಫ್ ನವಾಝ್ ಅಲ್ ಹುಸೈನೀ ಉಪಸ್ಥಿತರಿದ್ದರು.






