ಜಲಜೀವನ್ ಮಿಷನ್ ಯೋಜನೆಯ ಮೂಲಕ 24 ಗಂಟೆ ಕುಡಿಯುವ ನೀರು ಪೂರೈಕೆಗೆ ಕ್ರಮ : ಜಾಫರ್ ಸುತಾರ

ವಿಜಯನಗರ(ಹೊಸಪೇಟೆ) :ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಕೆಲ ಆಯ್ದ ಗ್ರಾಮಗಳಲ್ಲಿ 24 ಗಂಟೆ ನೀರು ಪೂರೈಕೆ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ಉಪಕಾರ್ಯದರ್ಶಿ ಜಾಫರ್ ಶರೀಫ್ ಸುತಾರ ಅವರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಮೂಲಕ ಕುಡಿಯುವ ನೀರನ್ನು ಎಲ್ಲಾ ಗ್ರಾಮಗಳಿಗೆ ಸಮರ್ಪಕವಾಗಿ ಪೂರೈಕೆ ಆಗುವಂತೆ ನಿಗಾವಹಿಸಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಜೆಜೆಎಂ ಮೂಲಕ ನಳದಲ್ಲಿ ಬರುವ ನೀರನ್ನು ಕುಡಿಯುವಂತೆ ಜಾಗೃತಿ ಮೂಡಿಸಬೇಕು. 24 ಗಂಟೆ ನೀರು ಪೂರೈಕೆಯಿಂದ ಎದುರಾಗುವ ಸವಾಲುಗಳ ಬಗ್ಗೆ ಪಿಡಿಓಗಳಿಂದ ಚರ್ಚಿಸಲಾಯಿತು. ಕುಡಿಯುವ ನೀರು ಪೋಲಾಗುವುದನ್ನು ನಿಯಂತ್ರಿಸಬಹುದು. 24 ಗಂಟೆಗಳ ಕಾಲ ನೀರು ಲಭ್ಯತೆಯಿಂದಾಗಿ ಅನಗತ್ಯ ನೀರು ಸಂಗ್ರಹ ನಿಲ್ಲುತ್ತದೆ. ಇದರಿಂದ ಸಮಯವು ಉಳಿತಾಯವಾಗುತ್ತದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಸಕ್ರೀಯಗೊಳಿಸಿ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ವಿಶ್ವ ಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ಎಂ.ಕುಳ್ಳಪ್ಪ, ಗುರುಗಾವ್ ಪೀಡ್‌ಬ್ಯಾಕ್ ಪೌಂಢೇಶನ್ ಸಿಇಒ ಅಜಯ್ ಸಿನ್ಹಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಎಸ್.ದೀಪಾ, ಆರ್‌ಡಬ್ಲೂಎಸ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿರೇಶ್ ನಾಯಕ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಎಇ, ಜೆಇ ಆರ್‌ಡಬ್ಲೂಎಸ್ ಸಹಾಯಕ ಕಾರ್ಯಪಾಲಕ ಅಭಿಯಂತರರು, ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.







