ಯುವ ಪೀಳಿಗೆ ರೂಪಿಸುವ ಅದ್ಭುತ ಶಕ್ತಿ ಶಿಕ್ಷಕರಿಗಿದೆ : ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಹರಪನಹಳ್ಳಿ: ಯುವ ಪೀಳಿಗೆಯನ್ನು ರೂಪಿಸುವ ಮತ್ತು ದೇಶದ ಭವಿಷ್ಯ ನಿರ್ಮಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವವರಲ್ಲ, ಮಕ್ಕಳಲ್ಲಿ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಶಿಲ್ಪಿಗಳು ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ತಾಲೂಕುಗಳ ಟಾಪರ್ ವಿದ್ಯಾರ್ಥಿಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಮುಂದಿನ ತಿಂಗಳು ಉಚಿತವಾಗಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಭರವಸೆ ನೀಡಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ಮರಳಿನಲ್ಲಿ ಅಕ್ಷರಾಭ್ಯಾಸದಿಂದ ಆರಂಭವಾದ ಶಿಕ್ಷಣ ವ್ಯವಸ್ಥೆ ಇಂದು ಆಧುನಿಕ ಹಂತ ತಲುಪಿದೆ. ತಾಲೂಕಿನ 54 ಸಾವಿರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಮುಂದಿನ ಶಿಕ್ಷಕರ ದಿನಾಚರಣೆಯನ್ನು ಎಲ್ಲರೂ ಸಾಂಪ್ರದಾಯಿಕ ಉಡುಪಿನಲ್ಲಿ ಆಚರಿಸುವಂತೆ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಇಒ ವೈ.ಎಚ್. ಚಂದ್ರಶೇಖರ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದರು. ವಿಬಿಜಿ ರಾಮ್‌ಜಿ ಯೋಜನೆಯಡಿ ತಾಲೂಕಿನಲ್ಲಿ 175 ಶಾಲಾ ಶೌಚಾಲಯ, 65 ಅಡುಗೆ ಕೋಣೆ ಹಾಗೂ 68 ಶಾಲಾ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸಮಾಜವನ್ನು ಸರಿದಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಎಸ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಈ ಬಾರಿಯ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಲ್ಲಿ ಉತ್ಸಾಹ ಕಡಿಮೆಯಾಗಿರುವುದು ಗಮನಾರ್ಹ ಎಂದು ಅಭಿಪ್ರಾಯಪಟ್ಟರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಮಾತನಾಡಿ, ಮಕ್ಕಳಲ್ಲಿ ಸಮಾನತೆ, ಸಂವಿಧಾನದ ಆಶಯ ಮತ್ತು ವೈಚಾರಿಕ ಪ್ರಜ್ಞೆ ಬೆಳೆಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಉತ್ತಮ ಫಲಿತಾಂಶಕ್ಕಾಗಿ ನಿರಂತರ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಗರಸಭೆ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ, ಲಾಟಿ ದಾದಪೀರ, ಮೈದೂರು ರಾಮಣ್ಣ, ದೇವೇಂದ್ರಗೌಡ, ರೆಡ್ಡಿ ಶಾಂತಕುಮಾರ, ಟಿಪಿಒ ಕೆ. ಷಣ್ಮುಖಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ ಸೇರಿದಂತೆ ಶಿಕ್ಷಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.






